ಬೆಂಗಳೂರು: ಇರಲಾರದೆ ಇರುವೆ ಬಿಟ್ಟುಕೊಂಡ ಎಂಬಂತೆ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಎಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶಾಂತ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಅಕ್ಟೋಬರ್ 9 ರಂದು ರಾತ್ರಿ 10 ಗಂಟೆ ವೇಳೆ ಟೀ ಕುಡಿಯಲು ಅನ್ನಸಂದ್ರಪಾಳ್ಯದಲ್ಲಿರುವ ಬೇಕ್ ಪ್ಯಾಲೇಸ್ ಬೇಕರಿಗೆ ಶಾಂತಕುಮಾರ್ ಹೋಗಿದ್ದರು. ಇದೇ ಸಮಯಕ್ಕೆ ಇಸ್ಲಾಂಪುರ ನಿವಾಸಿಗಳಾದ ಮುಬಾರಕ್ ಹಾಗೂ ಅರಾಫತ್ ಎಂಬುವರು ಬೇಕರಿಗೆ ಎಂಟ್ರಿ ಕೊಟ್ಟಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮುಬಾರಕ್, ಅರಾಫತ್ ರಿಂದ ಬೇಕರಿ ಹುಡುಗನ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಶಾಂತಕುಮಾರ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ದುಷ್ಕರ್ಮಿಗಳು ಇದರಲ್ಲಿ ನೀನ್ಯಾಕೋ ಮೂಗು ತೋರಿಸ್ತಿಯಾ ಎಂದು ಧಮಕಿ ಹಾಕಿ ಶಾಂತಕುಮಾರ್ ಮೂಗಿಗೆ ಡಿಚ್ಚಿ ಹೊಡೆದು, ನೆಲಕ್ಕೆ ಬೀಳಿಸಿ ಮನಸೋ ಇಚ್ಚೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.