ಬೆಂಗಳೂರು: ಕೊರೊನಾ ಭೀತಿಯಿಂದ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ರಾಜ್ಯದ ಜಿಮ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೆ ಜಿಮ್‌ಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ನ ಅಧ್ಯಕ್ಷ ಪ್ರಸಾದ್, ವಿಜಯನಗರದ ಐರನ್ ಟೆಂಪಲ್ ಜಿಮ್ ಮಾಲೀಕ ವಿಶ್ವಾಸ್ ಗೌಡ, ಬೊಮ್ಮನಹಳ್ಳಿಯಲ್ಲಿರುವ ಗೇಸ್ ಫಿಟ್ನೆಸ್ ಜಿಮ್ ಮಾಲೀಕ ಹಾಗೂ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಶರಣಪ್ಪ, ಮಿಕ್ಸ್ ಮಾರ್ಷಲ್ ಆರ್ಟ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗಾಯ್‌ತೊಂಡ ಹಾಗೂ ಕೋಚ್ ನವೀನ್ ಅವರಿದ್ದ ತಂಡ ರೇಸ್ ಕೋರ್ಸ್ ರಸ್ತೆಯ ನಿವಾಸಕ್ಕೆ ತೆರಳಿ ಡಿಸಿಎಂಗೆ ಮನವಿ ಸಲ್ಲಿಸಿದೆ.
ರಾಜ್ಯದಾದ್ಯಂತ ಸಾವಿರಾರು ಜಿಮ್‌ಗಳಿದ್ದು, ಲಾಕ್‌ಡೌನ್ ಜಾರಿಯಾದ ಬಳಿಕ ಅವುಗಳಿಗೆ ಬೀಗ ಹಾಕಲಾಗಿದೆ. ಇದರಿಂದ ಜಿಮ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜಿಮ್ ಆರಂಭಿಸಲು ಬ್ಯಾಂಕ್ಗಳಲ್ಲಿ ತೆಗೆದಿರುವ ಸಾಲದ ಇಎಂಐ, ಕಟ್ಟಡದ ಬಾಡಿಗೆ, ಟ್ರೈನರ್ ಸಂಬಳ, ವಿದ್ಯುತ್ ಬಿಲ್ ಮತ್ತಿತರ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಜಿಮ್ ಮಾಲೀಕರಿಗೆ ಸರ್ಕಾರದಿಂದಲೂ ಯಾವುದೇ ನೆರವು ನೀಡಿಲ್ಲ. ಹೀಗಾಗಿ ಜಿಮ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡಬೇಕು ಎಂದು ಜಿಮ್ ಮಾಲೀಕರು ಮನವಿ ಸಲ್ಲಿಸಿದ್ದಾರೆ.
ಅಲ್ಲದೆ ಜಿಮ್ನಲ್ಲಿ ಕಸರತ್ತು ಮಾಡುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು. ಕೂಡಲೇ ಸರ್ಕಾರ ಅನುಮತಿ ನೀಡಿದರೆ ಜಿಮ್ಗೆ ಬರುವ ಜನರ ಆರೋಗ್ಯವೂ ಸುಧಾರಿಸುತ್ತದೆ. ಹೀಗಾಗಿ ಜಿಮ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
ಜಿಮ್ ಮಾಲಿಕರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆದಷ್ಟು ಬೇಗ ಅನುಮತಿ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.