ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಈ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಕೆಲ ಸಾಮಾಜಿಕ ಜಾಲತಾಣಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬದವರಿಗೆ ಅಮೃತ ಜ್ಯೋತಿ ಕಾರ್ಯಕ್ರಮದ ಅಡಿ 75 ಯೂನಿಟ್‍ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಹಿಂಪಡೆದಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಗಸ್ಟ್ 24, 2022ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ - ಆಡಳಿತ ಇಲಾಖೆಯು ಭಾಗಶಃ ಪರಿಷ್ಕರಿಸಿದ್ದರಿಂದ ಸುತ್ತೋಲೆಯನ್ನು ಸೆಪ್ಟೆಂಬರ್ 3, 2022ರಂದು ಹಿಂಪಡೆಯಲಾಗಿದೆಯೇ ಹೊರತು, ಯೋಜನೆಯನ್ನು ರದ್ದುಪಡಿಸಿಲ್ಲ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: ಡಾಂಬರೀಕರಣ ಮಾಡಿದ್ದ ರಸ್ತೆ ಅಗೆದ ಆರೋಪ: ಟೆಲಿಕಾಂ ಸಂಸ್ಥೆಗಳಿಗೆ 80 ಕೋಟಿ ದಂಡ ವಿಧಿಸಿದ ಬಿಬಿಎಂಪಿ
ಬಿಪಿಎಲ್ ಕುಟುಂಬದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗ್ರಾಹಕರಿಗೆ 75 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ವಿದ್ಯುತ್ ಯೋಜನೆಯನ್ನು ರಾಜ್ಯ ಸರ್ಕಾರವು ಮೇ 18, 2022ರಂದು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಈ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂಬ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಈ ಯೋಜನೆಯನ್ನು ಇ - ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಬಿಟಿ ವ್ಯವಸ್ಥೆಯಡಿ ಜಾರಿಗೊಳಿಸಲಾಗಿದೆ. ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್ ಬಿಲ್ನ ಮೊತ್ತದಲ್ಲಿ 75 ಯೂನಿಟ್‍ಗಳವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಉಚಿತ ವಿದ್ಯುತ್‌ಗೆ ಕಡಿವಾಣ, ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಬೇಡ: ಸಿದ್ದರಾಮಯ್ಯ ಆಗ್ರಹ