ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿ ಆರೋಪಿ, ಅಧಿಕಾರಿ ಅಮೃತ್ ಪಾಲ್ ಇದ್ದಾರೆ. ಅವರಿಂದ ಜಪ್ತಿ ಮಾಡಿಕೊಂಡಿರುವ ಮೊಬೈಲ್ನಲ್ಲಿನ ದತ್ತಾಂಶ ಸಂಗ್ರಹ ಕಾರ್ಯದಲ್ಲಿ ಸಿಐಡಿ ತೊಡಗಿಸಿಕೊಂಡಿದ್ದು, ಡಿಜಿಟಲ್ ಎವಿಡೆನ್ಸ್ ಕಲೆ ಹಾಕುವಲ್ಲಿ ನಿರತವಾಗಿದೆ. ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಪಾಲ್ರನ್ನ ಇಂದು ಸಹ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಅಕ್ರಮ ಎಸಗಲು ಆಭ್ಯರ್ಥಿ ಹಾಗೂ ಮಧ್ಯವರ್ತಿಗಳು ಪಾಲ್ ಅವರ ಅಣತಿಯಂತೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ಜಪ್ತಿ ಮಾಡಿಕೊಂಡಿದ್ದ ವೇಳೆ ಆರೋಪಿಯು ಮೊಬೈಲ್ನಲ್ಲಿರುವ ಸಾಕ್ಷ್ಯಾಧಾರ ನಾಶಪಡಿಸಿದ್ದರು ಎನ್ನಲಾಗಿದೆ.
ರಿಟ್ರೈವ್ಗಾಗಿ ಮೊಬೈಲ್ ಎಫ್ಎಸ್ಎಲ್ಗೆ ಕಳುಹಿಸಿದ್ದರು. ಆ ವರದಿ ಬಂದಿದ್ದು, ಇದರ ಆಧಾರದ ಮೇರೆಗೆ ಅಳಿಸಿ ಹಾಕಲಾಗಿರುವ ದತ್ತಾಂಶಗಳ ಬಗ್ಗೆ ಕಲೆ ಹಾಕುವಲ್ಲಿ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ.. ಐಪಿಎಸ್ ಅಧಿಕಾರಿ ಪಾಲ್ ಮತ್ತೆ ಮೂರು ದಿನ ಪೊಲೀಸ್ ವಶಕ್ಕೆ
ಈ ಮಧ್ಯೆ ಅಕ್ರಮದಲ್ಲಿ ಕೈಜೋಡಿಸಿದ ಆರೋಪದಡಿ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಮನೋಜ್ ಸಿಐಡಿಗೆ ಬಲೆಗೆ ಬಿದ್ದಿದ್ದಾರೆ. ಮಧ್ಯವರ್ತಿಗಳು ಮತ್ತು ಡಿವೈಎಸ್ಪಿ ಶಾಂತಕುಮಾರ್ ಸಂಪರ್ಕ ಹಿನ್ನೆಲೆ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.
ಮನೋಜ್ ಪಿಎಸ್ಐ ಅಕ್ರಮದಲ್ಲಿ ಬಂಧಿಯಾಗಿರುವ ಎರಡನೇ ಪಿಎಸ್ಐ ಆಗಿದ್ದಾರೆ. ಈ ಹಿಂದೆ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಹರೀಶ್ ಬಂಧನವಾಗಿತ್ತು. ಇನ್ನೂ ಇದೇ ತಿಂಗಳಾಂತ್ಯದಲ್ಲಿ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲು ಬೆಂಗಳೂರು ಸಿಐಡಿ ತಯಾರಿ ನಡೆಸುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.