ಬೆಂಗಳೂರು : ಮಾರ್ಚ್ 25 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಅದಕ್ಕೂ ಒಂದು ದಿನ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಾಜ್ಯಕ್ಕೆ ಬರುತ್ತಿದ್ದಾರೆ. ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಜೋಡಿ ರಾಜ್ಯದಲ್ಲಿ ಕಮಾಲ್ ಮಾಡಲು ತಯಾರಾದಂತಿದೆ.
ಅಮಿತ್ ಶಾ ಪ್ರವಾಸ ವಿವರ: ಮಾರ್ಚ್ 23ರ ರಾತ್ರಿ 8 ಗಂಟೆಗೆ ನವದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಲಿರುವ ಅಮಿತ್ ಶಾ, ರಾತ್ರಿ 10.40 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಂದು ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 24ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆವರೆಗೂ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆಯಲಿರುವ ಮಾದಕ ದ್ರವ್ಯಗಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ನಂತರ ಕೊಮ್ಮಘಟ್ಟಕ್ಕೆ ತೆರಳಲಿರುವ ಶಾ ಮಧ್ಯಾಹ್ನ 2 ರಿಂದ 3 ಗಂಟೆವರೆಗೂ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಹಕಾರ ಸಮೃದ್ಧಿ ಸೌಧಕ್ಕೆ ಶಿಲಾನ್ಯಾಸ ನೆರವೇರಿಸುವರು. ಇದೇ ವೇಳೆ, ಸಹಕಾರ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕೊಮ್ಮಘಟ್ಟ ಕಾರ್ಯಕ್ರಮ ಮುಗಿಸಿ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು 3.30ಕ್ಕೆ ದೆಹಲಿಗೆ ವಾಪಸ್ ಆಗುವರು.
ಮೋದಿ ರಾಜ್ಯ ಪ್ರವಾಸ: ಅಮಿತ್ ಶಾ ನಿರ್ಗಮಿಸುತ್ತಿದ್ದಂತೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮಾರ್ಚ್ 25ರಂದು ಬೆಂಗಳೂರಿಗೆ ಆಗಮಿಸಲಿರುವ ಅವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಮದುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಿ ಕೆ.ಆರ್.ಪುರ, ವೈಟ್ ಫೀಲ್ಡ್ ನಡುವಿನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋ ರೈಡ್ ಮಾಡಲಿದ್ದಾರೆ. ದಾವಣಗೆರೆಗೆ ತೆರಳಲಿರುವ ಮೋದಿ ಬಿಜೆಪಿ ಮಹಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ದೆಹಲಿಗೆ ವಾಪಸಾಗಲಿದ್ದಾರೆ.
ಇದನ್ನೂ ಓದಿ : ಮಾ.25 ರಂದು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ.. ಪ್ರಧಾನಿ ಮೋದಿ ಭಾಗಿ: ರವಿಕುಮಾರ್