ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸಲಿಲ್ಲ. ಕಳಸಾ ಬಂಡೂರಿ ನಾಲೆ ಯೋಜನೆ ಬಗ್ಗೆ ಮಾತಾಡಲಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು ಅಮಿತ್ ಶಾ ಅವರಿಗೆ ಕೇಳಬೇಕಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದರು. ಅವರು ಕೇವಲ ಸಿಎಎ ಪರ ಪ್ರಚಾರ ಮಾಡಿ ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳಲು ಬಂದಿದ್ರು. ನಮ್ಮ ರಾಜ್ಯದ ಬಡವರು, ರೈತರ ಬಗ್ಗೆ ಅಮಿತ್ ಶಾ ಅವರಿಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಕೆಪಿಸಿಸಿಗೆ ಅಧ್ಯಕ್ಷರ ಆಯ್ಕೆ ವಿಚಾರ ಪ್ರಸ್ತಾಪಿಸಿದ ಖರ್ಗೆಯವರು, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೋ ಕಾದು ನೋಡ್ತೇವೆ. ನಮಗೆ ಆ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದರು.
ಇನ್ನು, ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಭಾವನಾತ್ಮಕವಾಗಿ ಪ್ರಚೋದಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡ್ತಾರೆ ಅಷ್ಟೇ. ದಲಿತರು ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ಸಿಎಎ ಹಿನ್ನೆಲೆಯಲ್ಲಿ ಅಮಿತ್ ಶಾ ದಲಿತರ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಖರ್ಗೆ ದೂರಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಮಹಾರಾಷ್ಟ್ರ ಮಾಡೆಲ್ ಅಳವಡಿಕೆ ವಿಚಾರ ಪ್ರಸ್ತಾಪಿಸಿ, ನಾನು ಈ ಬಗ್ಗೆ ಏನೂ ಹೇಳಲ್ಲ. ಏನಾದ್ರು ಹೇಳಿದ್ರೆ, ಅದನ್ನ ತಪ್ಪಾಗಿ ಅರ್ಥೈಸಲಾಗುತ್ತೆ ಎಂದ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ, ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಕುರಿತು ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದ್ರು.