ಬೆಂಗಳೂರು: ದಕ್ಷಿಣ ಭಾರತದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದು ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ರಾಜ್ಯದಲ್ಲಿ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. ಹಳೆ ಮೈಸೂರಿನತ್ತ ಅಮಿತ್ ಶಾ, ಉತ್ತರ ಕರ್ನಾಟಕದತ್ತ ಮೋದಿ ಚಿತ್ತ ಹರಿಸಿದ್ದು, ಕರುನಾಡಿನಲ್ಲಿ ಪೂರ್ಣ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪಲು ತಂತ್ರ ಹೆಣೆಯುತ್ತಿದೆ. ಹೀಗಾಗಿ ರಾಜ್ಯಕ್ಕೆ ಹೈಕಮಾಂಡ್ನ ಜೋಡೆತ್ತುಗಳು ಸರಣಿ ಪ್ರವಾಸದ ಮೂಲಕ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಲು ಮುಂದಾಗಿವೆ.
ಹಳೆ ಮೈಸೂರು ಭಾಗದಲ್ಲಿ ಶಾ ರಣತಂತ್ರ: 2022ನೇ ವರ್ಷ ಮುಗಿದ ಕಡೆಯ ಎರಡು ದಿನ ಕರ್ನಾಟಕ ಪ್ರವಾಸದಲ್ಲಿದ್ದ ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್ ಶಾ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಕಹಳೆ ಮೊಳಗಿಸಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದರು. ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಕೇಸರಿ ಅಲೆ ಎಬ್ಬಿಸಿದ್ದರು. ನಂತರ ಡಿ.31 ರಂದು ಬೆಂಗಳೂರಿನಲ್ಲಿ ಭರ್ಜರಿ ಸಮಾವೇಶ ನಡೆಸಿ ಬೂತ್ ಏಜೆಂಟರನ್ನು ಚುನಾವಣೆಗೆ ಅಣಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅದು ಕೇವಲ 8 ದಿನದ ಅಂತರದಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿ ಚುನಾವಣೆಗೆ ಸನ್ನದ್ದವಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಮೋದಿ ರಣ ಕಹಳೆ: ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಜನವರಿ 19 ರಂದು ಪ್ರಧಾನಿ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಎರಡನೇ ಪ್ರವಾಸಕ್ಕೂ ಪ್ರಧಾನಿ ಕಾರ್ಯಾಲಯ ಸಿದ್ದತೆ ಮಾಡಿಕೊಂಡಿದೆ. ಜ.19 ರಂದು ನಾರಾಯಣಪುರಕ್ಕೆ ಆಗಮಿಸಲಿರುವ ಮೋದಿ, ಕೇಂದ್ರ ಹಾಗೂ ರಾಜ್ಯ ಅನುದಾನಿತ ನಾರಾಯಣಪುರ ಎಡದಂಡೆ ಕಾಲುವೆ (ಎನ್ ಎಲ್ ಬಿ ಸಿ) ಆಧುನೀಕರಣದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಭದ್ರತಾ ಒಪ್ಪಿಗೆ ಬಾಕಿ ಇದ್ದು, ಅದು ಸಿಗುತ್ತಿದ್ದಂತೆ ಮೋದಿ ನಾರಾಯಣಪುರ ಭೇಟಿ ವೇಳೆಯಲ್ಲಿಯೇ ಗುಲ್ಬರ್ಗಾದ ಬಂಜಾರ ಸಮಾವೇಶ ನಡೆಸುವ ಯೋಜನೆಯನ್ನು ರಾಜ್ಯ ಬಿಜೆಪಿ ಘಟಕ ಹಾಕಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಸಮಯಾವಕಾಶ ನೀಡುತ್ತಿದ್ದಂತೆ ಬಂಜಾರ ಸಮಾವೇಶಕ್ಕೆ ಸಿದ್ದತೆ ಆರಂಭಿಸಲಾಗುತ್ತದೆ. ಈಗಾಗಲೇ ಸಮಾವೇಶಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಮೋದಿ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಸಮಾವೇಶ ಆಯೋಜನೆಗೆ ಮುಂದಾಗುತ್ತೇವೆ ಎಂದಿದ್ದಾರೆ.
ಕ್ಷೇತ್ರ ಭದ್ರಪಡಿಸಲು ಬಿಜೆಪಿ ತಯಾರಿ: ಎರಡು ದಶಕಗಳಿಂದ ಬಿಜೆಪಿಯ ಭದ್ರ ನೆಲೆಯಾಗಿರುವ ಉತ್ತರ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಅನುಮಾನ ವ್ಯಕ್ತವಾಗುತ್ತಿದೆ. ಹಂತ ಹಂತವಾಗಿ ಜೆಡಿಎಸ್, ಕಾಂಗ್ರೆಸ್ ನೆಲ ಕಚ್ಚಿ ಬಿಜೆಪಿ ಧ್ವಜ ಹಾರಾಡುತ್ತಿರುವ ಉತ್ತರ ಕರ್ನಾಟಕದಲ್ಲಿ ಈ ಬಾರಿ ಮೀಸಲಾತಿ ಹೋರಾಟ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೊಂದಿರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಾಸಕರ ಸಂಖ್ಯೆಯೇ ಹೆಚ್ಚಿದೆ. ಬಹುತೇಕ ಕ್ಷೇತ್ರಗಳಲ್ಲಿ ಸತತವಾಗಿ ಬಿಜೆಪಿ ಶಾಸಕರೇ ಆಯ್ಕೆಯಾಗುತ್ತಾ ಬರುತ್ತಿದ್ದಾರೆ. ಆದರೆ, ಈ ಬಾರಿ ಪಂಚಮಸಾಲಿ 2ಎ ಹೋರಾಟ ಪಕ್ಷಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿಗಾಗಿ ಹೊಸ ಪ್ರವರ್ಗ ರಚಿಸಿದ್ದರೂ ಅದಕ್ಕೆ ಪಂಚಮಸಾಲಿ ಸಮುದಾಯ ಅಸಮ್ಮತಿ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. 2ಎ ಸೌಲಭ್ಯದ ರೀತಿಯಲ್ಲಿ ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ. ಇದು ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಈ ಬಾರಿ ಬಿಜೆಪಿಗೆ ಮೀಸಲು ಬಿಸಿ ತುಪ್ಪ?: ಈ ಬಾರಿ ಉತ್ತರ ಕರ್ನಾಟಕ ಕಳೆದ ಬಾರಿಯಷ್ಟು ಸರಳವಾಗಿ ಬಿಜೆಪಿ ತಕ್ಕೆಗೆ ಸಿಗುವುದಿಲ್ಲ ಎನ್ನುವುದನ್ನು ಅರಿತಿರುವ ಬಿಜೆಪಿ ಹಕಮಾಂಡ್ ಉತ್ತರ ಕರ್ನಾಟಕವನ್ನೂ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋಡಿ ಮಾಡಲು ಮುಂದಾಗಿದ್ದು, ಸರಣಿ ಪ್ರವಾಸಗಳ ಮೂಲಕ ಉತ್ತರ ಕರ್ನಾಟಕ ಜನರ ಆಕರ್ಷಿಸಲು ಮುಂದಾಗಿದ್ದಾರೆ.
ಸದ್ಯ ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿ ಎರಡೂ ಬಾರಿಯೂ ಉತ್ತರ ಕರ್ನಾಟಕದಲ್ಲೇ ಪ್ರವಾಸ ಮಾಡಲಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿಯೂ ಕನಿಷ್ಠ 15 ದಿನಕ್ಕೊಮ್ಮೆ ಭೇಟಿ ನೀಡಲಿರುವ ಮೋದಿ ಆಗಲೂ ಉತ್ತರ ಕರ್ನಾಟಕಕ್ಕೇ ಆದ್ಯತೆ ನೀಡಲಿದ್ದಾರೆ. ಏಪ್ರಿಲ್ ನಲ್ಲಿ ನಾಲ್ಕು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಇಡೀ ರಾಜ್ಯದ ವ್ಯಾಪ್ತಿ ಹೊಂದುವ ರೀತಿ ಬೃಹತ್ ಸಮಾವೇಶಗಳಲ್ಲಿ ಭಾಗಿಯಾಗಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಹಳೆ ಮೈಸೂರು ಭಾಗದ ಗೆಲುವಿಗೆ ಚಾಣಕ್ಯ ತಂತ್ರ: ಇನ್ನು ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್ ಶಾ ಈವರೆಗೂ ಬಿಜೆಪಿ ಪಾಲಿಗೆ ಗಗನ ಕುಸುಮವಾಗಿರುವ ಹಳೆ ಮೈಸೂರಿನಲ್ಲಿ ಕಮಲ ಅರಳಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸಹಕಾರಿಗಳ ಭದ್ರನೆಲೆಯಾಗಿರುವ ಹಳೆ ಮೈಸೂರಿನ ಮದ್ದೂರಿನ ಮೆಗಾ ಡೇರಿಯನ್ನು ಉದ್ಘಾಟಿಸಿ ಸಹಕಾರಿಗಳ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ದೇವೇಗೌಡರು, ಆದಿಚುಂಚನಗಿರಿ ಶ್ರೀಗಳ ಜೊತೆ ವೇದಿಕೆ ಹಂಚಿಕೊಂಡು ಒಕ್ಕಲಿಗ ಸಮುದಾಯದ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಹಳೆ ಮೈಸೂರಿನ ಕ್ಷೇತ್ರಗಳನ್ನು ಸಚಿವರು ಮತ್ತು ಶಾಸಕರಿಗೆ ಹಂಚಿಕೆ ಮಾಡಿ ಜವಾಬ್ದಾರಿ ವಹಿಸಿರುವ ಅಮಿತ್ ಶಾ ಕ್ಷೇತ್ರವಾರು ವರದಿಗಳನ್ನು ಪಡೆದುಕೊಂಡಿದ್ದಾರೆ. ಜನವರಿ ಅಂತ್ಯಕ್ಕೆ ಮತ್ತೊಮ್ಮೆ ಮೈಸೂರು ಭಾಗಕ್ಕೆ ಅಮಿತ್ ಶಾ ಪ್ರವಾಸ ಹಮ್ಮಿಕೊಳ್ಳಲಿದ್ದು, ಆಗ ಕ್ಷೇತ್ರಗಳ ಉಸ್ತುವಾರಿಗಳಿಗೆ ಹೊಸ ಟಾಸ್ಕ್ ನೀಡಲಿದ್ದಾರೆ.
ಸಂಘಟನೆಗೆ ಶಾ ಬಲ: ಅಮಿತ್ ಶಾ ಪ್ರವಾಸದ ಕುರಿತು ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಗೆಲ್ಲಬೇಕೆಂಬ ಗುರಿ ನಮ್ಮದು. ಅಮಿತ್ ಶಾ ಸೂಚನೆಯಂತೆ ಪಕ್ಷ ಬಲಪಡಿಸಲು ವಿಶೇಷ ಗಮನ ಕೊಡುತ್ತಿದ್ದೇವೆ.ಈಗಾಗಲೇ ಅಮಿತ್ ಶಾ ಬಂದಿದ್ದರಿಂದ ನಮ್ಮ ಕಾರ್ಯಕರ್ತರಲ್ಲಿನ ಉತ್ಸಾಹ ಹೆಚ್ಚಾಗಿದ್ದು, ತಿಂಗಳಾಂತ್ಯಕ್ಕೆ ಮತ್ತೊಮ್ಮೆ ಬರುವುದಾಗಿ ಅಮಿತ್ ಶಾ ತಿಳಿಸಿದ್ದಾರೆ. ಆಗ ನಮ್ಮ ಸಂಘಟನೆಗೆ ಮತ್ತಷ್ಟು ಬಲ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ದ್ರಾವಿಡರ ನೆಲೆಗಟ್ಟಿನಲ್ಲಿ ಕೇಸರಿ ಮಾಡುತ್ತಾ ಕಮಾಲ್: ಉತ್ತರ ಭಾರತ, ಮಧ್ಯ ಭಾರತದಲ್ಲಿ ಬಿಜೆಪಿ ಬಲಿಷ್ಟವಾಗಿದ್ದರೂ ದ್ರಾವಿಡರ ನೆಲೆಗಟ್ಟಿನಲ್ಲಿ ಮಾತ್ರ ಕೇಸರಿ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ದಕ್ಷಿಣ ಭಾರತದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ಅಧಿಕಾರಕ್ಕೇರಲು ಸಾಧ್ಯವಾಗಿದ್ದು, ಕರ್ನಾಟಕದ ಮೂಲಕವೇ ದಕ್ಷಿಣ ರಾಜ್ಯಗಳಿಗೆ ಕಾಲಿಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.
ಹಾಗಾಗಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಅಧಿಕಾರ ಕೈತಪ್ಪಬಾರದು ಎಂದು ನಿರ್ಧರಿಸಿ ತಂತ್ರಗಾರಿಕೆ ಹೆಣೆಯುವಲ್ಲಿ ನಿತರವಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮೋಡಿ ಮಾಡಲು ಮುಂದಾಗಿದ್ದರೆ ಹಳೆ ಮೈಸೂರು ಭಾಗದಲ್ಲಿ ಅಮಿತ್ ಶಾ ಕಮಾಲ್ ಮಾಡಲು ಹೊರಟಿದ್ದಾರೆ.
ಬಿಜೆಪಿಯ ಈ ಇಬ್ಬರು ಅಗ್ರನಾಯಕರ ಅಣತಿಯಂತೆ ರಾಜ್ಯ ಬಿಜೆಪಿ ನಾಯಕರು ಮುಂದುವರೆಯುತ್ತಿದ್ದು, ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಶಾ ಜೋಡಿಯ ತಂತ್ರಗಾರಿಕೆ ಸಫಲವಾಗುತ್ತಾ, ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳುತ್ತಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ, ಆಪ್ತರ ಬೇಸರ