ಬೆಂಗಳೂರು: "ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಕುಂದಗೋಳದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನ ಕಾಯಿ ತಿಳಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
"ಮೋದಿ ಅವರಿಗಾಗಿ ಹುಬ್ಬಳ್ಳಿ ಜನತೆ 8 ಕಿಲೋಮೀಟರ್ ರೋಡ್ ಶೋ ಮಾಡಿದ್ದರು. ಇದು ಇಡೀ ದೇಶದಲ್ಲಿ ಮೋದಿಗೆ ಇರುವ ಜನಪ್ರಿಯತೆ ತೋರಿಸುತ್ತದೆ. ಅದೇ ರೀತಿ ಜನವರಿ 28 ರಂದು ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 27 ರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಲಿದ್ದಾರೆ. 28 ರಂದು ಕೆಎಲ್ಇ ಕಾರ್ಯಕ್ರಮ ಮತ್ತು ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ನಡೆಸಲಿದ್ದಾರೆ. ನಂತರ ಧಾರವಾಡದಲ್ಲಿ ನೂತನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಬಳಿಕ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ" ಎಂದರು.
"ಕುಂದಗೋಳದ ಪುರಾತನ ಶಂಭುಲಿಂಗ ದೇವಾಲಯಕ್ಕೆ ಪೂಜೆ ಸಲ್ಲಿಸಿ ಅದೇ ವಾರ್ಡ್ನಲ್ಲಿ ವಾಲ್ ಪೇಂಟಿಂಗ್ ಮಾಡುವ ಮೂಲಕ ವಿಜಯ ಸಂಕಲ್ಪ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ನಂತರ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕುಂದಗೋಳ ಕ್ಷೇತ್ರದಲ್ಲಿ ಅಮಿತ್ ಶಾ ಅವರ ಬೃಹತ್ ರೋಡ್ ಶೋ ನಡೆಯಲಿದೆ. ದೊಡ್ಡ ಪ್ರಮಾಣದಲ್ಲಿ ಇದಕ್ಕೆ ಸಿದ್ಧತಾ ಕಾರ್ಯ ನಡೆದಿದೆ. ಪೊಲೀಸ್ ಠಾಣೆಯಿಂದ ಬ್ರಹ್ಮದೇವರ ದೇವಾಲಯದವರೆಗೆ ಒಂದೂವರೆ ಕಿಲೋಮೀಟರ್ ರೋಡ್ ಶೋ ನಡೆಯಲಿದೆ. ಇದೇ ವೇಳೆ ಮನೆಗಳಿಗೆ ಕರಪತ್ರ ಹಂಚಲಿದ್ದು, ಮಿಸ್ ಕಾಲ್ ಅಭಿಯಾನಕ್ಕೂ ಅಮಿತ್ ಶಾ ಚಾಲನೆ ನೀಡಲಿದ್ದಾರೆ" ಎಂದು ತಿಳಿಸಿದರು.
"ಎಂಕೆ ಹುಬ್ಬಳ್ಳಿಯಲ್ಲಿ ಜನ ಸಂಕಲ್ಪ ಯಾತ್ರೆ ಭಾಗವಾಗಿ ಕಿತ್ತೂರಿನಲ್ಲಿ ನಡೆಯುವ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಲಕ್ಷಾಂತರ ಜನ ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾವೇಶ ಆಯೋಜನೆ ಮಾಡಲಾಗಿದೆ. ಇದರ ನಂತರ ಬೆಳಗಾವಿಗೆ ಸಂಬಂಧಿಸಿದಂತೆ ಎರಡು ಸಭೆ, ಸಂಘಟನಾ ಸಭೆ, ಪ್ರಮುಖರ ಸಭೆ ನಡೆಯಲಿದೆ. ಯಡಿಯೂರಪ್ಪ, ಬೊಮ್ಮಾಯಿ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ" ಎಂದು ಹೇಳಿದರು.
ಅಮಿತ್ ಶಾ ಸಭೆಯಲ್ಲಿ ಜಾರಕಿಹೊಳಿ ಭಾಗಿ: "ಮಂಡ್ಯ, ಬೆಂಗಳೂರಿನಲ್ಲಿ ಆದ ರೀತಿಯೇ ಬೆಳಗಾವಿ, ಹುಬ್ಬಳ್ಳಿಯಲ್ಲಿ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಕಾರ್ಯತಂತ್ರದ ಕುರಿತು ಚರ್ಚೆಯಾಗಲಿದೆ. ಅಲ್ಲಿನ ಜಿಲ್ಲೆಯ ಪ್ರಮುಖರನ್ನು ಸಂಪರ್ಕಿಸಲಿದ್ದಾರೆ. ಹೆಚ್ಚಿನ ಸ್ಥಾನ ಗೆಲ್ಲುವ ಕುರಿತು ಚರ್ಚಿಸಲಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿಲ್ಲ, ಬೆಳಗಾವಿಯಲ್ಲಿ ನಡೆಯಲಿರುವ ಅಮಿತ್ ಶಾ ಅವರ ಎರಡೂ ಸಭೆಯಲ್ಲಿ ಜಾರಕಿಹೊಳಿ ಭಾಗಿಯಾಗಲಿದ್ದಾರೆ."
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಹೇಶ್ ಟೆಂಗಿನಕಾಯಿ, "ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್, ಆ ಪದ ಹುಟ್ಟಿದ್ದೇ ಕಾಂಗ್ರೆಸ್ನಿಂದ, ರಾಜ್ಯ, ದೇಶದಲ್ಲಿ ಕಾಂಗ್ರೆಸ್ನಿಂದಲೇ ಭ್ರಷ್ಟಾಚಾರ ಹುಟ್ಟಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಬೇಕಿಲ್ಲ, ಗಣಪತಿ ಸಾವಿನಲ್ಲಿ ಏನಾಯಿತು? ಸಾಕ್ಷಿ ನಾಶಪಡಿಸಿ ಸಿಬಿಐಗೆ ಕೊಟ್ಟರು ಇದರಿಂದ ಏನಾದರೂ ನ್ಯಾಯ ಸಿಗಲು ಸಾಧ್ಯವೇ? ಮುಂದಿನ ದಿನದಲ್ಲಿ ಕಾದು ನೋಡಿ ಏನಾಗಲಿದೆ" ಎಂದರು.
ಒಂದಲ್ಲ ಹತ್ತು ಬಾರಿ ರಾಜ್ಯಕ್ಕೆ ಕರೆಸಿಕೊಳ್ಳುತ್ತೇವೆ: "ಮೋದಿ ಜಗತ್ತು ಒಪ್ಪಿಕೊಳ್ಳುವ ನಾಯಕ, ಅವರು ನಮ್ಮ ಪಕ್ಷದ ನಾಯಕರು ಅವರನ್ನು ನಾವು ಕರೆಸಿಕೊಳ್ಳುತ್ತೇವೆ ಇದರಲ್ಲಿ ಏನು ತಪ್ಪು?, ರಾಹುಲ್ ಗಾಂಧಿ ಕರೆಸಲು ಇವರಿಗೆ ಮುಖ ಇಲ್ಲ, ರಾಹುಲ್ ಗಾಂಧಿ ಬಂದ ಕಡೆಯಲ್ಲೆಲ್ಲ ಕಾಂಗ್ರೆಸ್ ಸೋತಿದೆ. ಹಾಗಾಗಿ ಅವರನ್ನು ರಾಜ್ಯಕ್ಕೆ ಕರೆಸಲ್ಲ. ಆದರೆ ನಾವು ನಮ್ಮ ನಾಯಕರನ್ನು ಕರೆಸಿಕೊಳ್ಳಲಿದ್ದೇವೆ. ಇನ್ನು ಹತ್ತು ಸಲ ನಮ್ಮ ನಾಯಕರನ್ನು ಕರೆಸಿಕೊಳ್ಳುತ್ತೇವೆ, ಬೇರೆ ರಾಜ್ಯಕ್ಕೆ ಹೋದಂತೆ ಇಲ್ಲಿಗೂ ನಮ್ಮ ದೆಹಲಿ ನಾಯಕರು ಬರಲಿದ್ದಾರೆ. ನಾವು ಕೂಡ ಬೇರೆ ರಾಜ್ಯಕ್ಕೆ ಪ್ರಚಾರಕ್ಕೆ ಹೋಗುತ್ತೇವೆ ಇದರಲ್ಲೇನು ತಪ್ಪಿದೆ?".
ರಮೇಶ್ ಜಾರಕಿಹೊಳಿ ಹಣ ಹಂಚುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಮಹೇಶ್ ಟೆಂಗಿನಕಾಯಿ, "ಮೊದಲು ಅವರು ಕುಕ್ಕರ್ ಹಂಚುವುದನ್ನು ನಿಲ್ಲಿಸಲಿ, ಅದು ಎಲ್ಲಿಂದ ಬರಲಿದೆ ಹೇಳಲಿ, ಪಕ್ಷ ಎಂದೂ ಚುನಾವಣಾ ಅಕ್ರಮಕ್ಕೆ ಸಾತ್ ನೀಡಲ್ಲ. ರಾಜಕಾರಣದಲ್ಲಿ ಯಾರೂ ಸನ್ಯಾಸಿ ಅಲ್ಲ, ಪಕ್ಷ ಏನು ಹೇಳಲಿದೆಯೋ ಅದನ್ನು ನಾವು ಪಾಲನೆ ಮಾಡಲಿದ್ದೇವೆ. ನಮಗೆ ಚುನಾವಣೆಗೆ ನಿಲ್ಲಿ ಎಂದರೆ ನಿಲ್ಲುತ್ತೇವೆ, ಯಾವ ಜವಾಬ್ದಾರಿ ಕೊಡಲಿದೆಯೋ ಅದನ್ನು ನಿಭಾಯಿಸಲಿದ್ದೇವೆ. ಪಕ್ಷ ಹೇಳಿದ್ದನ್ನು ನಾವು ನಿರಾಕರಿಸಲ್ಲ."
"ಅರಕಲಗೂಡಿನಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಕುರಿತು ಮಾಹಿತಿ ಬಂದಿದೆ. ದೊಡ್ಡ ವಿಸ್ತಾರದಲ್ಲಿ ಪಕ್ಷದ ಬೆಳವಣಿಗೆ ಆಗುತ್ತಿದೆ. ಹೀಗಾಗಿ ಅಲ್ಲಲ್ಲಿ ಸಣ್ಣ ಸಣ್ಣ ಘಟನೆ ನಡೆಯುವುದು ಸಹಜ, ಆದರೂ ಇಂತಹ ಘಟನೆ ಒಪ್ಪಲು ಸಾಧ್ಯವಿಲ್ಲ, ಇದಕ್ಕೆ ಕಡಿವಾಣ ಹಾಕಲಿದ್ದೇವೆ. ಉಸ್ತುವಾರಿ ಜವಾಬ್ದಾರಿ ನೀಡಿದ ಒಂದೇ ದಿನದಲ್ಲಿ ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಪೋಸ್ಟರ್ ಪ್ರದರ್ಶಿಸಲಾಗಿದೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗುತ್ತದೆ" ಎಂದರು.
ಇದನ್ನೂ ಓದಿ: ಹಾಸನ: ಸ್ವಪಕ್ಷ ಕಾರ್ಯಕರ್ತನ ಮೇಲೆ ಬಿಜೆಪಿಯ ಗ್ರಾಮಾಂತರ ಉಪಾಧ್ಯಕ್ಷರಿಂದ ಹಲ್ಲೆ