ಬೆಂಗಳೂರು: ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನ ಯಡಿಯೂರಪ್ಪ ಅವರಿಗೆ ಮೀಸಲಾಗಿದೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ. ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಭ್ರಮೆಯಲ್ಲಿ ನಾನಿಲ್ಲವೆಂದು ನಾಯಕತ್ವ ಬದಲಾವಣೆ ವಿವಾದ ಕುರಿತಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟೀಕರಣ ನೀಡಿದ್ದಾರೆ.
ದೆಹಲಿಯಿಂದ ಮರಳಿದ ನಂತರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ವೇಳೆ ನಾಯಕತ್ವ ಬದಲಾವಣೆಯಂತಹ ಸುದ್ದಿಯನ್ನು ಹರಿಬಿಡಲಾಗಿದೆ. ಯಾರು ಮಸಾಲೆ, ಒಗ್ಗರಣೆ ಹಾಕಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಮಾಧ್ಯಮಗಳು ಸತ್ಯ ಸುದ್ದಿಯನ್ನು ಹೆಚ್ಚು ಬಿತ್ತರಿಸಿದರೆ ಘನತೆ ಇನ್ನಷ್ಟು ಹೆಚ್ಚಲಿದೆ. ಅದು ನಿಮ್ಮಿಂದ ಆಗಲಿ ಎಂದು ಆಶಿಸುತ್ತೇನೆ. ಸಿಎಂ ಸ್ಥಾನದ ಭ್ರಮೆ ನನಗಿಲ್ಲ. ಅಂತಹ ಆಲೋಚನೆಯನ್ನು ನಾನು ಮಾಡಿಲ್ಲ. ಆ ರೀತಿ ಯೋಚಿಸುವ ಸನ್ನಿವೇಶದಲ್ಲಿಯೂ ನಾನು ಇಲ್ಲ. ಸದ್ಯ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಮೂರು ವರ್ಷದ ನಂತರ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಬಂದಾಗ ಆ ಸನ್ನಿವೇಶ ನಿರ್ಮಾಣವಾಗುತ್ತದೆ. ಆದರೆ ಈ ಅವಧಿಯ ಮೂರು ವರ್ಷ ಯಡಿಯೂರಪ್ಪ ಅವರಿಗೆ ಮೀಸಲಾಗಿದೆ. ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಹೊಸ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ನಾವೆಲ್ಲ ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಹೃದಯ ಚಿಕಿತ್ಸೆಯಾಗಿದ್ದ ಕಾರಣ ಯೋಗಕ್ಷೇಮ ವಿಚಾರಿಸಲು ಹೋಗಿದ್ದೆ. ಆದರೆ ಕಾಕತಾಳಿಯವಾಗಿ ನಾನು ರಾಜ್ಯಪಾಲರನ್ನು ಭೇಟಿಯಾದ ಬಳಿಕ ದೆಹಲಿಗೆ ಹೋದ ಕಾರಣ ಅನೇಕ ಸುದ್ದಿ ಹರಡಿದವು. ಹೀಗಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿ ಈ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಭೇಟಿ ವೇಳೆ ಸಹಜವಾಗಿ ನಮ್ಮ ರಾಜ್ಯದ ಸಚಿವರನ್ನು ಭೇಟಿ ಮಾಡಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಸಿಹಿ ಕೊಟ್ಟು ಬಂದಿದ್ದೇನೆ ಎಂದರು.
ಯಾವುದೇ ರಾಜಕೀಯ ಉದ್ದೇಶ ಗೊಂದಲ ಸೃಷ್ಟಿಸುವ ಉದ್ದೇಶ ನನಗಿಲ್ಲ. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ. ಎಲ್ಲ ವಿವರವನ್ನು ಅವರಿಗೆ ನೀಡಲಿದ್ದೇನೆ. ವದಂತಿಗಳಿಗೆ ರೆಕ್ಕೆಪುಕ್ಕ ಹುಟ್ಟಿ ಕಾಗೆಗಳು ಹಾರಾಡುವಂತಾಗುತ್ತೆ. ಈಗಾಗಲೇ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಾವುದೇ ಸ್ಥಾನದ ಬಗ್ಗೆ ಆಸೆ ಪಟ್ಟ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಇರುವವರೆಗೂ ಯಾರೂ ಪ್ರಶ್ನೆ ಮಾಡುವ ಸನ್ನಿವೇಶ ಬರುವುದಿಲ್ಲ ಎಂದು ಸವದಿ ಹೇಳಿದರು.
ನಾನು ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದೆ ಎನ್ನುವುದು ಸುಳ್ಳು. ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರನ್ನು ಭೇಟಿಯಾಗಿದ್ದು, ಸಾರಿಗೆ ಇಲಾಖೆ ಮತ್ತು ರಸ್ತೆ ತೆರಿಗೆ ವಿಚಾರವಾಗಿ ಚರ್ಚೆ ನಡೆಸಲು ಮಾತ್ರ. ಅಥಣಿ ಕ್ಷೇತ್ರದ ರಸ್ತೆ ಕಾಮಗಾರಿ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ನಿರ್ಭಯಾ ಸ್ಕೀಮ್ನಲ್ಲಿ ಸ್ವಲ್ಪ ಹಣ ಬಿಡುಗಡೆ ಆಗಿದೆ. ಅದಕ್ಕೆ ಸಂಬಂಧಪಟ್ಟಂತೆ ಪೂರ್ಣ ಒಪ್ಪಿಗೆ ಪಡೆಯಲಾಗಿದೆ. ನಂತರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿದ್ದೆ. ಎಲೆಕ್ಟ್ರಿಕ್ ಬಸ್ ವಿಚಾರ ಸಂಬಂಧ ಮಾತನಾಡಿದ್ದು, ಬೆಂಗಳೂರಿಗೆ 300, ಹುಬ್ಬಳ್ಳಿ-ಧಾರವಾಡಕ್ಕೆ 50 ಎಲೆಕ್ಟ್ರಿಕ್ ಬಸ್ಗಳ ವ್ಯವಸ್ಥೆ ಕಲ್ಪಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಸವದಿ ಮಾಹಿತಿ ನೀಡಿದರು.