ಬೆಂಗಳೂರು: ನೂತನ ಕಮಿಷನರ್ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ನಿರ್ಗಮಿತ ಕಮಿಷನರ್ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಹಾಕಿದ್ದರು. ಆದರೆ ಇಂದು ಅವರು ಅರ್ಜಿಯನ್ನ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಅವಧಿ ಮುಗಿಯುವ ಮುನ್ನವೇ ನಗರ ಪೊಲೀಸ್ ಆಯುಕ್ತರಾಗಿದ್ದ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು. ಕಳೆದ ವಿಚಾರಣೆ ವೇಳೆ ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿಯು ನೂತನ ಆಯುಕ್ತ ಭಾಸ್ಕರ್ ರಾವ್ ಹಾಗೂ ಇತರೆ ಪ್ರತಿವಾದಿಗಳಿಗೆ ಅಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು. ಹೀಗಾಗಿ ಆಗಸ್ಟ್ 13 ಕ್ಕೆ ಆಕ್ಷೇಪಣೆಯನ್ನು ಪ್ರತಿವಾದಿಗಳು ಸಲ್ಲಿಸಿದ್ದರು.
ನಂತರ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 14 ಕ್ಕೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ವಕೀಲರು ವಾದ ಮಾಡಲು ಸಮಾಯವಾಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆ.16( ಇಂದಿ)ಗೆ ಮುಂದೂಡಲಾಗಿತ್ತು.
ಇಂದು ಸಿಎಟಿ ದ್ವಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಸರ್ಕಾರದ ಪರ ವಾದ ಮಂಡನೆಗೆ ಖುದ್ದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು. ಆದರೆ ಇದೇ ಸಮಯಕ್ಕೆ ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ ಕಾರಣ ಪ್ರಕರಣ ಇತ್ಯರ್ಥ ಮಾಡಿ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.