ಬೆಂಗಳೂರು: ಅಲೋಕ್ ಕುಮಾರ್ ಅವರ ಹೆಸರನ್ನ ಕೇಳಿದ್ರೆ ಅಂಡರ್ವರ್ಲ್ಡ್ ಡಾನ್ಗಳು ಶೇಕ್ ಆಗ್ತಿದ್ರು. ಅಂತಹ ಖಡಕ್ ಅಧಿಕಾರಿಯನ್ನೇ ಸಿಎಂ ಕುಮಾರಸ್ವಾಮಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯಕ್ತರನ್ನಾಗಿ ನೇಮಿಸಿದ್ರು. ಇದೀಗ ರಾಜ್ಯ ಸರ್ಕಾರ ಮತ್ತೆ ಅಲೋಕ್ ಕುಮಾರ್ರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.
ಅಲೋಕ್ ಕುಮಾರ್ ಬಿಹಾರ್ ಮೂಲದವರಾಗಿದ್ದು, 1994ರ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಅಲೋಕ್ ಕುಮಾರ್ ಅವರಿಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಅಲೋಕ್ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಸಿಲಿಕಾನ್ ಸಿಟಿ, ಹಾಗೇ ರಾಜ್ಯದಲ್ಲೇ ದೊಡ್ಡ ಹೆಸ್ರು ಮಾಡಿದ್ದಾರೆ. ಇದಾದ ಬೆನ್ನಲ್ಲೇ ಎಡಿಜಿಪಿಯಾಗಿ ಬಡ್ತಿ ಪಡೆದ ಮೊದಲ ದಿನವೇ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಸರ್ಕಾರ ಇವರನ್ನ ಆಯ್ಕೆ ಮಾಡಿದೆ.
ವೃತ್ತಿ ಬದುಕಿನ ಮೊದಲ ಹುದ್ದೆಯಾಗಿ ಬೆಳಗಾವಿಯ ಎಸ್ಪಿಯಾಗಿ ಆಯ್ಕೆಯಾದ ಅಲೋಕ್ಕುಮಾರ್, ನಂತರ ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆ ಎಸ್ಪಿಯಾದ್ರು. ಅದಾದ ಬಳಿಕ 2006ರಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿದ ಅಲೋಕ್ ಕುಮಾರ್ಗೆ ನಗರದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಹುದ್ದೆ ನೀಡಲಾಯ್ತು. ಬಳಿಕ ಉಡುಪಿ-ಕಾರ್ಕಳ ರೇಂಜ್ನ ನಕ್ಸಲ್ ನಿಗ್ರಹ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ರು. ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಲೋಕ್ ಕುಮಾರ್ ರೌಡಿಗಳ ಪಾಲಿಗೆ, ಸಮಾಜಘಾತುಕರ ಪಾಲಿಗೆ ಸಿಂಹಸ್ವಪ್ನವಾಗಿದ್ರು. ಇದನ್ನ ಗಮನಿಸಿದ ರಾಜ್ಯ ಸರ್ಕಾರ ಅವರನ್ನ ಮತ್ತೆ ಬೆಂಗಳೂರಿಗೆ ಕರೆಸಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತು. ನಂತರ ಹಲವು ಹುದ್ದೆಗಳನ್ನು ನಿಭಾಯಿಸಿ ಸಿಸಿಬಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.