ಬೆಂಗಳೂರು: ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ತನ್ನ ಅಧಿಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ನಿವಾಸದಲ್ಲಿ ಈ ಟಿವಿ ಭಾರತ್ ಜೊತೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ಎಲ್ಲ ನಾಯಕರು ಪ್ರಯತ್ನ ನಡೆಸಿದ್ದಾರೆ. ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಹರಸಾಹಸಪಡುತ್ತಿರುವುದು ಸತ್ಯ. ಬಿಜೆಪಿ ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದು ಹರಿಹಾಯ್ದರು.
ಇನ್ನು ಸದ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರೆಯುತ್ತಾರೆ. ಮುಖ್ಯಮಂತ್ರಿಯ ಬದಲಾವಣೆ ಸಾಧ್ಯವಿಲ್ಲ ಎಂದು ಸಿಎಂ ಬದಲಾವಣೆ ಕೂಗಿಗೆ ತೆರೆ ಎಳೆದರು.
ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ಎರಡು ದಿನಗಳಲ್ಲಿ ನಿವಾರಣೆ:
ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕ ಇನ್ನೆರಡು ದಿನಗಳಲ್ಲಿ ನಿವಾರಣೆಯಾಗಲಿದೆ ಎಂದು ಸಂಸದ ಡಿಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡುತ್ತಾರೆ ಅನ್ನುವುದು ಮಾಧ್ಯಮಗಳ ವರದಿ. ಅತೃಪ್ತರ ಮನವೊಲಿಸಲು ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ಬಿಜೆಪಿಯವರ ಆಪರೇಷನ್ ಕಮಲ ಅಂತಿರೋ, ಆಪರೇಷನ್ ಮೋದಿ ಅಥವಾ ಆಪರೇಷನ್ ಶಾ ಅಂತಿರೋ ಗೊತ್ತಿಲ್ಲ ಎಂದರು.
ಈ ರೀತಿಯ ವಾತಾವರಣ ದೇಶದಲ್ಲಿ ಯಾವುತ್ತೂ ಆಗಿರಲಿಲ್ಲ. ಬಿಜೆಪಿ ನಾಯಕರ ಉದ್ದೇಶವನ್ನು ಮಾಧ್ಯಮಗಳು ರಾಜ್ಯದ ಜನತೆಗೆ ತಿಳಿಸಬೇಕು. ಅಧಿಕಾರ ಇರುತ್ತೇ ಹೋಗುತ್ತೇ. ಆದ್ರೆ ಪ್ರಜಾಪ್ರಭುತ್ವವನ್ನ ನಾವು ಗೌರವಿಸಬೇಕು ಎಂದರು.