ಬೆಂಗಳೂರು: ಗೋದಾಮಿನಲ್ಲಿದ್ದ ಸಂಗ್ರಹಿಸಿದ್ದ 21 ಐಫೋನ್ ಕಳವಾದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಫ್ಲಿಪ್‌ಕಾರ್ಟ್ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳಾಗಿರುವ ಫ್ಲಿಪ್‌ಕಾರ್ಟ್ ಕಂಪನಿಯ ವ್ಯವಸ್ಥಾಪಕ ಸಿ.ವಿ. ರಾಘವೇಂದ್ರ ಹಾಗೂ ಸಹಾಯಕ ವ್ಯವಸ್ಥಾಪಕ ಶ್ರೀರಾಮ ನಂದಿನ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಗೋದಾಮಿನಲ್ಲಿ 2022ರ ಜು.19ರಂದು ಕಳ್ಳತನ ನಡೆದಿದೆ ಎಂದು ಆರೋಪಿಸಲಾಗಿದೆ. ಆ.4ರಂದು ದೂರು ದಾಖಲಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಅರ್ಜಿದಾರರ ವಿರುದ್ಧ ಸಂದೇಹದ ಮೇಲೆ ದೂರು ದಾಖಲಿಸಲಾಗಿದೆ. ಆದರೆ, ಗೋದಾಮಿನ ಭದ್ರತಾ ಅಧಿಕಾರಿಯೇ ದೂರುದಾರರಾಗಿದ್ದಾರೆ. ಗೋದಾಮು ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ತಪಾಸಣೆ ನಡೆಸಲಾಗುತ್ತದೆ. ಹೀಗಿರುವಾಗ, ಐಫೋನ್ ಗಳು ಗೋದಾಮಿನಿಂದ ಹೊರ ಹೋಗಿದ್ದಾದರೂ ಹೇಗೆ ಎಂಬ ಬಗ್ಗೆ ಭದ್ರತೆಯ ಮೇಲ್ವಿಚಾರಣೆ ವಹಿಸಿದ್ದ ದೂರುದಾರರೇ ವಿವರಣೆ ನೀಡಬೇಕಾಗುತ್ತದೆ.
ಆದರೆ, ಭದ್ರತೆ ಒದಗಿಸುವ ತಮ್ಮ ಕರ್ತವ್ಯದಲ್ಲಿ ಆಗಿರುವ ಲೋಪದ ಬಗ್ಗೆ ಯಾವುದೇ ವಿವರಣೆಯನ್ನು ಅವರು ನೀಡಿಲ್ಲ. ಅರ್ಜಿದಾರರು ಗೋದಾಮಿನಲ್ಲಿ ಐಫೋನ್ ಬಾಕ್ಸ್‌ಗಳನ್ನು ವಿಂಗಡಿಸುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಸಂಶಯದಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಅವರೇ ಐಫೋನ್‌ಗಳನ್ನು ಕದ್ದಿದ್ದಾರೆ ಎನ್ನುವುದನ್ನು ತೋರಿಸುವ ಯಾವುದೇ ದಾಖಲೆಗಳು ಇಲ್ಲವೆಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಷರತ್ತುಗಳು : ಅರ್ಜಿದಾರರು ಮುಂದಿನ 15 ದಿನದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಶರಣಾಗಬೇಕು. ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಇಬ್ಬರಿಂದಲೂ ತಲಾ 1 ಲಕ್ಷ ರು. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು.
ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿ ಸೂಚಿಸಿದಾಗಲೆಲ್ಲ ಹಾಜರಾಗಬೇಕು. ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ತಿಂಗಳಿಗೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂದು ಷರತ್ತು ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಗೋದಾಮಿನಿಂದ 21 ಐಫೋನ್-12 ಮೊಬೈಲ್‌ಗಳು ಕಳ್ಳತನವಾಗಿವೆ ಎಂದು ಭದ್ರತಾ ಮೇಲ್ವಿಚಾರಕ ಕೆ.ಕೆ. ಚಂದ್ರಕಾಂತ್ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಕಳ್ಳತನವಾಗುವ ಮುನ್ನ ಐಫೋನ್‌ಗಳನ್ನು ಅರ್ಜಿದಾರರೇ ವಿಂಗಡಣೆ ಮಾಡುತ್ತಿದ್ದುದು ಕಂಡು ಬಂದಿತ್ತು. ಆದ್ದರಿಂದ, ಅರ್ಜಿದಾರರ ಬಗ್ಗೆ ಸಂದೇಹ ವ್ಯಕ್ತಪಡಿಸಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಕಳ್ಳತನ ಮಾಡಿದ ಆರೋಪದಡಿಯಲ್ಲಿ ದೂರು ದಾಖಲಿಸಲಾಗಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಇದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಜಮೀನು ವಿವಾದ.. ಕೆಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್