ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮಾಡಿದ್ದ ಆರೋಪ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ. ಆದರೆ ಹಿರಿಯಾಧಿಕಾರಿ ಹೆಚ್ಎನ್ ಸತ್ಯನಾರಾಯಣ್ ವಿರುದ್ಧ ಎಸಿಬಿ ತನಿಖೆಗೆ ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲವೆಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಜೈಲು ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಎಸಿಬಿಗೆ ಪ್ರಕರಣ ವರ್ಗಾವಣೆಯಾದ ನಂತರ 2019 ರಲ್ಲೇ 2 ಆರೋಪಗಳ ವಿಚಾರವಾಗಿ ತನಿಖೆಗೆ ಆದೇಶ ನೀಡುವಂತೆ ಎಸಿಬಿ ಪತ್ರ ಬರೆದಿತ್ತು. ಆದರೆ ಈವರೆಗೂ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗ್ತಿದೆ. ಜೈಲು ಅಕ್ರಮದಲ್ಲಿ ಸತ್ಯನಾರಾಯಣ್ ಮೇಲೆ, ಸಜೆ ಕೈದಿ ಶಶಿಕಲಾಗೆ ವಿಶೇಷ ಸವಲತ್ತು ನೀಡಲು 2 ಕೋಟಿ ಹಣ ಲಂಚ ಪಡೆದಿದ್ದರು ಎಂದು ಅಂದಿನ ಡಿಐಜಿ ಡಿ. ರೂಪಾ ಆರೋಪ ಮಾಡಿದ್ರು. ಆರೋಪದ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಅವರ ನೇತೃತ್ವದ ತಂಡವನ್ನ ಸರ್ಕಾರ ನೇಮಕ ಮಾಡಿ ಪ್ರಕರಣದ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ನೀಡಲು ಸೂಚಿಸಿತ್ತು. ಅದರಂತೆ ಮೂರು ತಿಂಗಳು ತನಿಖೆ ನಡೆಸಿದ್ದ ನಿವೃತ್ತ ಅಧಿಕಾರಿ ತನಿಖಾ ತಂಡ ಅವಧಿ ಮುಗಿದ ಬಳಿಕ ವಿಸ್ತೃತ ವರದಿ ನೀಡಿದ್ದರು. ಬಳಿಕ ಎರಡು ಪ್ರಕರಣಗಳನ್ನು ತನಿಖೆಗೆ ಸರ್ಕಾರ ಎಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಿತ್ತು.
ಏನಿದು ಆರೋಪ?
ಆರೋಪ-1:
ವೃಕ್ಷಂ ಟ್ಯಾಲೆಂಟ್ ಗ್ರೂಪ್ ಸಂಸ್ಥೆ ಜೈಲು ಸಿಬ್ಬಂದಿಗೆ ತರಬೇತಿ ನೀಡುವ ಮಾತುಕತೆ ನೀಡಿತ್ತು. ಈ ಸಂಸ್ಥೆಗೆ 1 ವರ್ಷಕ್ಕೆ 11 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. ಪ್ರತಿ ಬ್ಯಾಚ್ನಲ್ಲಿ 25-30 ಜೈಲಧಿಕಾರಿಗಳಿಗೆ ತರಬೇತಿ ಹಣ ಪಡೆಯುವ ನಿಯಮ ಇತ್ತು. ಆದರೆ ಕೇವಲ 1-2 ದಿನ ತರಬೇತಿ ನೀಡಿ, ಉಳಿದ ದಿನ ತರಬೇತಿ ನೀಡದೆ ಕೆಲವೊಂದು ಬ್ಯಾಚ್ನಿಂದ ಲಕ್ಷ-ಲಕ್ಷ ಹಣ ತೆಗೆದುಕೊಂಡು, ಟೆಂಡರ್ ಕರೆಯದೆ ಸಂಸ್ಥೆಗೆ ಗುತ್ತಿಗೆ ನೀಡಿರೋದು ಬಹಿರಂಗವಾಗಿತ್ತು. ಹೀಗಾಗಿ ಕೆಟಿಪಿಪಿ-ಕರ್ನಾಟಕ ಟ್ರಾನ್ಸಫರನ್ಸಿ ಇನ್ ಪಬ್ಲಿಕ್ ಪ್ರಾಕ್ಯೂರ್ ಮೆಂಟ್ಸ್ ಅಡಿ ಎಸಿಬಿ ಪ್ರಕರಣ ದಾಖಲಿಸಿ ತನಿಖೆಗೆ ನಡೆಸಲು ಸರ್ಕಾರದ ಅನುಮತಿ ಕೇಳಿತ್ತು.
ಆರೋಪ - 2:
ಜೈಲಿನಲ್ಲಿ ಮೊಬೈಲ್ ಸಿಗ್ನಲ್ ಸಂಬಂಧ ಜಾಮರ್ ಕಾರ್ಯ ನಿರ್ವಹಿಸದೆ ಇದ್ದರು ಇದರ ವೆಚ್ಚ ಭರಿಸಿದ್ದು, ಟೆಂಡರ್ ನೀಡಿದ ಕಂಪನಿಗೆ ವಾರ್ಷಿಕ ನಿರ್ವಹಣಾ ವೆಚ್ಚ ನೀಡಲಾಗಿದೆ. ಹೀಗಾಗಿ ಅನ್ಯ ಮಾರ್ಗದಿಂದ ಕಂಪನಿಗೆ ಲಾಭವುಂಟಾಗಿದೆ. ಇದೂಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಬರುತ್ತೆ. ಹೀಗಾಗಿ ಎರಡೂ ಪ್ರಕರಣಗಳ ತನಿಖೆಗೆ ಎಸಿಬಿ ಮನವಿ ಮಾಡಿತ್ತು.
ಆದರೆ ಇದುವರೆಗೂ ತನಿಖೆಗಾಗಿ ಅನುಮತಿ ಸಿಕ್ಕಿಲ್ಲ. ಸರ್ಕಾರದಿಂದ ಯಾಕೆ ಇನ್ನೂ ಪೂರ್ವಾನುಮತಿ ನೀಡಿಲ್ಲ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಸದ್ಯ ಡಿ ರೂಪಾ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.