ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ 18-21ರ ವಯಸ್ಕರಿಗೆ ಚಿತ್ರಹಿಂಸೆ ನೀಡಲಾಗ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಅಪರಾಧ ಮಾಡಿದ 18-21ರ ವಯಸ್ಕರು ಜೈಲಿನ ಸ್ಕೂಲ್ ಬ್ಯಾರಕ್ನಲ್ಲಿರಬೇಕಾಗಿದ್ದು, ಇವರನ್ನು ಸಾಮಾನ್ಯ ಬ್ಯಾರಕ್ಗೆ ಹಾಕಲಾಗಿದೆ. ಈ ವಯಸ್ಸಿನವರನ್ನು ಸ್ಕೂಲ್ ಬ್ಯಾರಕ್ನಲ್ಲಿ ಇಡಬೇಕು. ಆದ್ರೆ ಸಾಮಾನ್ಯ ಬ್ಯಾರಕ್ಗೆ ಹಾಕಲಾಗಿದೆ. ಅವರನ್ನು ಆದಷ್ಟು ಬೇಗ ಸ್ಕೂಲ್ ಬ್ಯಾರಕ್ಗೆ ಶಿಫ್ಟ್ ಮಾಡುವಂತೆ ಪರಪ್ಪನ ಅಗ್ರಹಾರದಲ್ಲಿರುವ ಕೈದಿ ರಾಮಕೃಷ್ಣ ಗೃಹ ಇಲಾಖೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೈದಿ ರಾಮಕೃಷ್ಣನಿಗೆ ಇನ್ನುಳಿದ ಕೈದಿಗಳು ಸಾಥ್ ನೀಡಿದ್ದು, ಈ-ಜನಸ್ಪಂದನಾ ಮೂಲಕ ದೂರು ರವಾನಿಸಿದ್ದಾರೆ. ಆದ್ರೆ ಈ ಆರೋಪವನ್ನು ತಳ್ಳಿ ಹಾಕಿರುವ ಜೈಲಾಧಿಕಾರಿಗಳು, ಸ್ಕೂಲ್ ಬ್ಯಾರಕ್ನಲ್ಲಿ ಕೈದಿಗಳನ್ನು ಇಡುತ್ತೇವೆ. ಆದರೆ ಕೋವಿಡ್-19 ಇದ್ದ ಕಾರಣ ಇಡಲು ಆಗಿಲ್ಲ. ವಯಸ್ಕ ಕೈದಿಗಳನ್ನು ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿದೆ ಎಂದಿದ್ದಾರೆ. ಸದ್ಯ ಈ ಪತ್ರ ಬಹಳ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ನನಗೆ ಈವರೆಗೆ ಆ ರೀತಿ ದೂರಿನ ಪ್ರತಿ ಬಂದಿಲ್ಲ. ನಾನು ಜೈಲಾಧಿಕಾರಿಯಾಗಿದ್ದಾಗ ಆ ರೀತಿ ಯಾವುದೇ ದೂರು ಇರಲಿಲ್ಲ. ಸಾಮಾನ್ಯವಾಗಿ 18-21ರ ವಯಸ್ಸಿನವರನ್ನು ಸಾಮಾನ್ಯ ಬ್ಯಾರಕ್ನಲ್ಲೂ ಇರಿಸಬಹುದು. ಆದ್ರೆ ಅವರನ್ನು ಅಪರಾಧ ಚಟುವಟಿಕೆಗೆ ಬಳಸಿಕೊಳ್ಳುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ರೀತಿ ದೂರು ಕೊಟ್ಟಿರುವುದು ನಮಗೆ ಈಗ ಗೊತ್ತಾಗಿದೆ. ಒಂದು ವೇಳೆ ಗೃಹ ಇಲಾಖೆಗೆ ದೂರು ಬಂದರೆ, ತಕ್ಷಣ ಆ ಬಗ್ಗೆ ನಾನು ವರದಿ ಕೇಳಿ, ಸತ್ಯಾನುಸತ್ಯತೆ ತಿಳಿದು ಕ್ರಮ ಜರುಗಿಸಲು ಮುಂದಾಗುತ್ತೇನೆ ಎಂದು ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಸ್ಪಷ್ಟಪಡಿಸಿದ್ದಾರೆ.