ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಸತಿ ಯೋಜನೆ ಸಂಬಂಧ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು ಹಾಗೂ ತೇಜೋವಧೆ ಮಾಡುವ ದೃಷ್ಟಿಯಿಂದ ದುರುದ್ದೇಶಪೂರ್ವಕವಾಗಿ ಮಾಡಿರುವ ಆರೋಪಗಳು ಎಂದು ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಸತಿ ಯೋಜನೆ ಸಂಬಂಧ ಮಾಡಿರುವ ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಕಳೆದ 18 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ. ಆದರೆ, ಕಳೆದ 18 ತಿಂಗಳಿಂದ ಅಂದರೆ 01.08.2019 ರಿಂದ 04.02.2021ರವರೆಗೆ ರಾಜ್ಯದ ವಸತಿ ಯೋಜನೆಯ ಫಲಾನುಭವಿಗಳಿಗೆ ರೂ. 2514.57 ಕೋಟಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪೈಕಿ, ರೂ.1236 ಕೋಟಿಗಳನ್ನು ಗ್ರಾಮೀಣ ಭಾಗದ ಫಲಾನುಭವಿಗಳಿಗೆ ನೀಡಲಾಗಿದೆ. ಭಾಲ್ಕಿ ವಿಧಾನಸಭಾ ಕ್ಷೇತ್ರವೊಂದಕ್ಕೆ ರೂ. 8.72 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದಿದ್ದಾರೆ.
ಗ್ರಾಮೀಣ ಭಾಗದ ರೈತರಿಗೆ ಸೇರಬೇಕಾದ ಹಣವನ್ನು ಡೈವರ್ಟ್ ಮಾಡಿ ಬೆಂಗಳೂರಿನ 1 ಲಕ್ಷ ಬಹುಮಹಡಿ ಕಟ್ಟಡಗಳಿಗೆ ಮುಂಗಡ ನೀಡಲಾಗಿದೆ ಎಂದಿದ್ದಾರೆ. ಆದರೆ, ಗ್ರಾಮೀಣ ಭಾಗದ ರೈತರಿಗೆ ಸೇರಬೇಕಾದ ಒಂದೇ ಒಂದು ರೂಪಾಯಿಯನ್ನು ಡೈವರ್ಟ್ ಮಾಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 1 ಲಕ್ಷ ಬಹುಮಹಡಿ ಯೋಜನೆಯ ಗುತ್ತಿಗೆ ಕರಾರಿನ ನಿಯಮದನ್ವಯ ಗುತ್ತಿಗೆ ಮೊತ್ತದ ಶೇ 5ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಡೆದು ಈವರೆಗೂ ರೂ.146.90 ಕೋಟಿಗಳನ್ನು ಗುತ್ತಿಗೆದಾರರಿಗೆ ಮುಂಗಡ ಪಾವತಿಸಿದೆ. ಆದರೆ, ರೂ. 88.46 ಕೋಟಿಗಳನ್ನು ಹಿಂದಿನ ಸರ್ಕಾರ ಯಾವುದೇ ಕಾಮಗಾರಿ ಪ್ರಾರಂಭವಾಗದಿದ್ದರೂ ಗುತ್ತಿಗೆದಾರರಿಗೆ ಮುಂಗಡ ಪಾವತಿಸಿದೆ ಎಂದು ಆರೋಪಿಸಿದ್ದಾರೆ.
ರೂ.400 ಕೋಟಿಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಗುತ್ತಿಗೆದಾರರಿಗೆ ಮುಂಗಡ ನೀಡಲಾಗಿದೆ ಎಂದ ಅವರು, ಆದರೆ, 83,119 ಮನೆಗಳನ್ನು ನಿರ್ಮಿಸಲು ಕಾರ್ಯಾದೇಶ ನೀಡಿರುವ ಗುತ್ತಿಗೆದಾರರಿಗೆ ನಮ್ಮ ಸರ್ಕಾರ ಟೆಂಡರ್ ನಿಯಮಾವಳಿಗಳಂತೆ ಕೇವಲ ರೂ. 5.27 ಕೋಟಿಗಳನ್ನು ಮಾತ್ರ ಪಾವತಿಸಿದೆ. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರೂ. 94.28 ಕೋಟಿಗಳನ್ನು ಮುಂಗಡ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
1 ಲಕ್ಷ ಯೋಜನೆಯಡಿ ಯಾವುದೇ ಫಲಾನುಭವಿ ಆಯ್ಕೆಯಾಗಿಲ್ಲ ಎಂದಿದ್ದಾರೆ. ಆದರೆ, ಹಿಂದಿನ ಸರ್ಕಾರ 2017ರಲ್ಲಿ ಘೋಷಿಸಿದ್ದ ಈ ಯೋಜನೆಗಾಗಿ ಅವರ ಸರ್ಕಾರದ ಅವಧಿಯಲ್ಲೇ 48,646 ಜನ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಈ ಎಲ್ಲಾ ಅರ್ಜಿದಾರರಿಗೆ ತಾತ್ಕಾಲಿಕ ಆಯ್ಕೆ ಪತ್ರವನ್ನೂ ಸಹ ಹಿಂದಿನ ಸರ್ಕಾರದ ಅವಧಿಯಲ್ಲೇ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಹಿಂದಿನ ಸರ್ಕಾರದ ಅವಧಿ 24.11.2018 ರಂದೇ 46,499 ಬಹುಮಹಡಿ ಮನೆಗಳನ್ನು (ಜಿ+3 ಇಂದ ಎಸ್+14) ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಪೈಕಿ 28,754 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶವನ್ನೂ ನೀಡಿ, ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ, ಒಂದೇ ಒಂದು ಎಕರೆ ವಿವಾದರಹಿತ ಜಮೀನನ್ನು ಗುತ್ತಿಗೆದಾರರಿಗೆ ಹಿಂದಿನ ಸರ್ಕಾರ ಹಸ್ತಾಂತರಿಸದೇ ಇದ್ದುದರಿಂದ ಯಾವುದೇ ಮನೆಯ ಕಾಮಗಾರಿ ಪ್ರಾರಂಭವಾಗಿರಲಿಲ್ಲ ಎಂದು ದೂರಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 354 ಎಕರೆ ವಿವಾದ ರಹಿತ ಜಮೀನನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿ, 35,155 ಮನೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ ಮತ್ತು 16,395 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶವನ್ನೂ ಸಹ ನೀಡಿದೆ ಎಂದು ವಿವರಿಸಿದ್ದಾರೆ.
ಈಗಾಗಲೇ ಪ್ರಾರಂಭಿಸಲಾದ 35,055 ಮನೆಗಳ ಪೈಕಿ, ಜಮೀನು ಸಮತಟ್ಟು ಹಂತದಲ್ಲಿ 8846 ಮನೆಗಳು, ಮಣ್ಣು ಅಗೆತದ ಹಂತದಲ್ಲಿ 13,298, ತಳಪಾಯದ ಹಂತದಲ್ಲಿ 10,281, ಫಿಂತ್ ಹಂತದಲ್ಲಿ 4,246 ಹಾಗೂ ಛಾವಣಿ ಹಂತದಲ್ಲಿ 104 ಮನೆಗಳಿದ್ದು, ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಬಾಕಿ ಉಳಿದ ಉಳಿದ 53,501 (8+3) ನಿರ್ಮಾಣಕ್ಕೆ 364 ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 2,064 (ಜಿ+3) ಮನೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 1,968 (ಜಿ+3) ಮನೆಗಳನ್ನು ನಿರ್ಮಿಸಲು SLECAH (ಎಸ್ಎಲ್ಇಸಿಎಹೆಚ್) ಅನುಮೋದನೆ ದೊರಕಿದ್ದು, 8,000 (3+3) ಮಾದರಿಯ ಮನೆಗಳನ್ನು ನಿರ್ಮಿಸಲು ಯೋಜನಾ ವರದಿಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹದೇವ್ ಪ್ರಸಾದ್ ಎಂಬ ಭ್ರಷ್ಟಾತಿ ಭ್ರಷ್ಟ ಅಧಿಕಾರಿಯನ್ನು ಎಲ್ಲಾ ನಿಯಮ ಉಲ್ಲಂಘನೆ ಮಾಡಿ ನಿಗಮದ ಆಡಳಿತದಲ್ಲಿ ಮುಂದುವರೆಸಲಾಗಿದೆ ಎಂಬ ಆರೋಪಕ್ಕೆ, ಮಹದೇವ್ ಪ್ರಸಾದ್, ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಇವರನ್ನು ಕೆಲವು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ 2016ರ ಜನವರಿ ಮಾಹೆಯಲ್ಲಿ ಅಮಾನತ್ತಿನಲ್ಲಿ ಇಡಲಾಗಿದ್ದು, 2018ರ ಏಪ್ರಿಲ್ ತಿಂಗಳಿನಲ್ಲಿ ಇವರ ಅಮಾನತ್ತನ್ನು ತೆರವುಗೊಳಿಸಲಾಗಿತ್ತು ಮತ್ತು ಸೆಪ್ಟೆಂಬರ್ 2019ರಲ್ಲಿ ಇವರನ್ನು ರಾಜೀವ್‌ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಹುದ್ದೆಗೆ ನೇಮಿಸಲಾಗಿತ್ತು. ಇವರ ಮೇಲಿನ ವಿಚಾರಣಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಓದಿ: ಹರೇಕಳ-ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಸ್ಥಳಕ್ಕೆ ಖಾದರ್ ಭೇಟಿ
ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಇರುವವರೆಂದು 17 ಜನ ಕೊಳಗೇರಿ ನಿವಾಸಿಗಳನ್ನು ಎತ್ತಂಗಡಿ ಮಾಡಿ, ಅವರ ಸರಂಜಾಮುಗಳನ್ನು ಹೊರಗೆ ಹಾಕಿರುವುದು ಅಮಾನವೀಯ ಎಂದಿದ್ದಾರೆ. ಬೆಂಗಳೂರು ಅಗ್ರಹಾರ ದಾಸರಹಳ್ಳಿ ಕೊಳಚೆ ಪ್ರದೇಶದಲ್ಲಿ ಕೇಂದ್ರ ಪುರಸ್ಕೃತ ಬಿಎಸ್‌ಯುಪಿ-ಬಿಬಿಎಂಪಿ ಯೋಜನೆಯಲ್ಲಿ ಮಂಜೂರಾದ ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗಿದೆಯಾದರೂ ಫಲಾನುಭವಿಗಳ ಆಯ್ಕೆ ಹಂಚಿಕೆಯು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
02.11.2019ರಂದು ಬಿಬಿಎಂಪಿ ವತಿಯಿಂದ ಅನುಮೋದಿಸಿ ನೀಡಿರುವ 30 ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರಿಲ್ಲದ 17 ಜನ ಅನಧಿಕೃತ ನಿವಾಸಿಗಳಿಗೆ ತಿಳುವಳಿಕೆ ಪತ್ರ ನೀಡಿ ಮನೆ ತೆರವುಗೊಳಿಸಲು ಸೂಚಿಸಲಾಗಿತ್ತು. ಆದರೆ, ಉಚ್ಛ ನ್ಯಾಯಾಲಯವು 31.01.2021ರವರೆಗೆ ಸದರಿ ನಿವಾಸಿಗಳನ್ನು ತೆರವುಗೊಳಿಸದಂತೆ ಸೂಚಿಸಿತ್ತು. ಹಾಗಾಗಿ, ಅರ್ಜಿದಾರರ ಅಹವಾಲನ್ನು ಆಲಿಸಿ, ಮಂಡಳಿಯ ವತಿಯಿಂದ ಆದೇಶ ಹೊರಡಿಸಲಾಗಿದ್ದು, ಅದರಂತೆ 11.02.2021ರಂದು ಬೆಳಿಗ್ಗೆ 11.45ರ ಸುಮಾರಿಗೆ ಅನಧಿಕೃತ ನಿವಾಸಿಗಳನ್ನು ತೆರವುಗೊಳಿಸಿ ಸೂಕ್ತ ಮಹಜರ್ ನಡೆಸಿ ಅರ್ಹ ನಿವಾಸಿಗಳ ವಶಕ್ಕೆ ಸದರಿ ಮನೆಗಳನ್ನು ನೀಡಲಾಗಿದೆ. ಆದ್ದರಿಂದ, ಅನಧಿಕೃತ ನಿವಾಸಿಗಳನ್ನು ಕಾನೂನುಬದ್ಧವಾಗಿ ತೆರವುಗೊಳಿಸುವ ಪ್ರಕ್ರಿಯೆಯನ್ನು ಮಂಡಳಿಯ ವತಿಯಿಂದ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.