ಬೆಂಗಳೂರು: ನಗರಸಭೆಗೆ ಸೇರಿದೆ ಎನ್ನಲಾದ ನಿವೇಶನದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಚಿತ್ರದುರ್ಗ ನಗರದ ವಾರ್ಡ್ ಸಂಖ್ಯೆ 12 ರ ನೀಲಕಂಟೇಶ್ವರ ದೇವಾಲಯದ ಎದುರು ನಗರಸಭೆಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯ ನಿವಾಸಿ ರಾಮಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ನಗರ ಯೋಜನೆ ಮತ್ತು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಚಿತ್ರದುರ್ಗ ನಗರಸಭೆ ಆಯುಕ್ತರು ಮತ್ತು ಕಟ್ಟಡ ನಿರ್ಮಿಸುತ್ತಿರುವ ಡಿ. ಯಶೋಧರ ಅವರಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿತು. ಅಲ್ಲದೇ, ಸರ್ಕಾರಿ ನಿವೇಶನದಲ್ಲಿ ಕಟ್ಟಡ ನಿರ್ಮಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ವರದಿ ನೀಡಲು ಅಧಿಕಾರಿವೋರ್ವರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಆರೋಪ: ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ಡಿ. ಯಶೋಧರ ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ನೀಲಕಂಠೇಶ್ವರ ದೇವಾಲಯದ ಎದುರು ಇರುವ 115-186 ಅಳತೆಯ ನಿವೇಶನದಲ್ಲಿ ತಾತ್ಕಾಲಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ. ಈ ನಿವೇಶನ ನಗರಸಭೆಗೆ ಸೇರಿದ್ದು ಎಂದು ದೂರುದಾರ ರಾಮಣ್ಣ ಆರೋಪಿದ್ದರು. ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಈ ಜಾಗ ಮೇಡಹಳ್ಳಿ ಗ್ರಾಮದ ಸರ್ವೇ ನಂಬರ್ 47/3 ರಲ್ಲಿದೆ. ಕಾಲಾಂತರದಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿದ ಈ ಜಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಸ್ಥಾಪಿಸಲಾಗಿತ್ತು. ಆದರೆ 2015ರಲ್ಲಿ ಈ ಜಾಗ ತನ್ನದೆಂದು ಹೇಳಿಕೊಂಡು ಯಶೋಧರ ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
2019ರ ಮೇ 13ರಂದು ನಗರಸಭೆಯಿಂದ ಅನುಮತಿ ಪಡೆದಿದ್ದೇನೆ ಎಂದು ಹೇಳಿಕೊಂಡು ಬಾಡಿಗೆಗೆ ನೀಡಲು ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ. ಈ ಕುರಿತು 2020ರ ಜನವರಿ 29ರಂದು ಮಾಹಿತಿ ಕೇಳಿದಾಗ ನಗರಸಭೆ ಅಧಿಕಾರಿಗಳು ಅಂತಹ ಯಾವುದೇ ಅನುಮತಿ ನೀಡಿಲ್ಲವೆಂದು ಲಿಖಿತವಾಗಿ ತಿಳಿಸಿದ್ದಾರೆ. ಜತೆಗೆ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಯಶೋಧರ ಅವರಿಗೆ ಸೂಚಿಸಲಾಗಿದೆ. ಆದರೆ ಪ್ರಭಾವಿ ವ್ಯಕ್ತಿಯಾಗಿರುವ ಇವರು ಯಾರಿಗೂ ಲೆಕ್ಕಿಸದೇ, ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರೆಸಿದ್ದಾರೆ. ಹೀಗಾಗಿ ಅಕ್ರಮ ಕಟ್ಟಡ ನಿರ್ಮಾಣವನ್ನು ತಡೆಯುವಂತೆ ಹಾಗೂ ತೆರವು ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.