ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಈ ಸಂಬಂಧ ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿದರು. ಸಭಾಪತಿ ಪ್ರತಾಪ್ ಚಂದರ್ ಶೆಟ್ಟಿ ನಿಯಮ 68ಕ್ಕೆ ಪರಿವರ್ತಿಸಿ ರೂಲಿಂಗ್ ನೀಡಿದರು. ಚರ್ಚೆಗೆ ಸಮಯಾವಕಾಶ ನಿಗದಿಪಡಿಸುವುದಾಗಿ ಪ್ರಕಟಿಸಿದರು.
ವಿಧಾನಪರಿಷತ್ ಕಲಾಪದ 2ನೇ ದಿನ ಶೂನ್ಯ ವೇಳೆ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಿಯಮ 69ರ ಅಡಿ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ. ಹಾಗಾಗಿ ಎಲ್ಲ ವಿಷಯ ಬದಿಗೊತ್ತಿ ಈ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳಲು ಮನವಿ ಮಾಡಿದರು. ಆದರೆ, ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದರು. ನಿಲುವಳಿ ಸೂಚನೆ ಕ್ರಮಬದ್ಧವಾಗಿಲ್ಲ. ನಿಯಮ 59ರ ಅಡಿ ನಿರ್ದಿಷ್ಟ ಘಟನೆ ಉಲ್ಲೇಖಿಸಬೇಕು. ಆದರೆ, ಇಲ್ಲಿ ಅದನ್ನು ಪಾಲಿಸಿಲ್ಲ ಎಂದರು.
ಸಭಾನಾಯಕರ ಹೇಳಿಕೆಗೆ ಸಿಎಂ ಇಬ್ರಾಹಿಂ ಸಿಡಿಮಿಡಿಗೊಂಡರು. ನೀವು ವಿರೋಧ ಪಕ್ಷದಲ್ಲಿ ಇಲ್ಲ, ಆಡಳಿತ ಪಕ್ಷದಲ್ಲಿದ್ದೀರಿ. ನಿಮ್ಮ ಕೆಲಸ ಕೇಳುವುದು. ಅಧಿಕಾರದಲ್ಲಿದ್ದೀರಿ ಕೇಳುವ ವ್ಯವಧಾನ ಇರಬೇಕು. ಕೇಳುವುದು ನಿಮ್ಮ ಕೆಲಸ, ಕೇಳಿ ಉತ್ತರ ಕೊಡಿ ಎಂದರು. ನಂತರ ನಿಲುವಳಿ ಸೂಚನೆ ಪ್ರಸ್ತಾವನೆ ಸಲ್ಲಿಸಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸಿಎಎ ಕಾಯ್ದೆ, ಎನ್ಆರ್ಸಿ ವಿರೋಧಿಸಿ ರಾಜ್ಯದ ಉದ್ದಗಲವೂ ಹೋರಾಟ ನಡೆದಿದೆ. ಈ ವೇಳೆ ಸೆಕ್ಷನ್ 144 ಹಾಕಿದ್ರು. ಹೈಕೋರ್ಟ್ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ನಮ್ಮದು ಶಾಂತಿಪ್ರಿಯ ರಾಜ್ಯ.
ಆದರೆ, ಮಂಗಳೂರು ಗೋಲಿಬಾರ್, ಬೀದರ್ ಶಾಹಿನ್ ಶಾಲೆ ಪ್ರಕರಣ, ಮರಿದೇವಯ್ಯ ಘಟನೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಯು ಟಿ ಖಾದರ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸದನದ ಗಮನ ಸೆಳೆದರು. ಸರ್ಕಾರ ಮುಂಜಾಗೃತೆ ವಹಿಸಬೇಕು. ಸಿಎಂ, ಗೃಹ ಸಚಿವರ ಮೇಲೆ ಜವಾಬ್ದಾರಿ ಇದೆ. ಉತ್ತರ ಭಾರತದ ರೀತಿ ಅನಾಹುತ ಇಲ್ಲಿ ಆಗಬಾರದು ಎಂದರೆ, ಅಂತಹವರ ವಿರುದ್ಧವೇ ಕೇಸು ಹಾಕಿದ್ದಾರೆ.
ಶಾಹಿನ್ ಶಾಲೆಯ ಘಟನೆಯಲ್ಲಿ ಮಗುವಿನ ತಾಯಿ ಮೇಲೆ ಕೇಸು ಹಾಕಿದ್ದಾರೆ. ರಾಜ್ಯದ ಉದ್ಧಗಲಕ್ಕೆ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ. ಪೊಲೀಸರು ಸರ್ಕಾರ ಏನು ಹೇಳುತ್ತೋ ಹಾಗೆ ಕೇಳುತ್ತಿದ್ದಾರೆ. ದೇಶದ್ರೋಹದ ಕೇಸು ದಾಖಲಿಸಲು ಈ ಸರ್ಕಾರವೇ ಸೂಚನೆ ನೀಡಿದಂತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಡಿದ್ದು, ಆಡಳಿತ ಯಂತ್ರ ಸ್ಥಗಿತಗೊಂಡಿದೆ.
ಹಾಗಾಗಿ ಚರ್ಚೆಗೆ ಅವಕಾಶ ನೀಡಿವಂತೆ ಮನವಿ ಮಾಡಿದರು. ನಿಯಮ 59ರ ಸಾರ್ವಜನಿಕ ಜರೂರು ವಿಷಯದ ಮೇಲೆ ಮಂಡಿಸಿದ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಪರಿವರ್ತಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿ ಚರ್ಚೆಗೆ ಸಮಯ ನಿಗದಿಪಡಿಸುವುದಾಗಿ ತಿಳಿಸಿದರು.