ಬೆಂಗಳೂರು: ‘ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಯಾಕೇಜ್ ಮೊತ್ತಕ್ಕೆ ಮಿತಿ ಹೇರಿದ್ದರಿಂದ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯನ್ಯಾಯಮೂರ್ತಿ ಪಿ ಬಿ ವರಾಲೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆ ನಡೆಸಿತು. ಅಲ್ಲದೇ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ಸರ್ಕಾರದ ಟೆಂಡರ್ಗಳಲ್ಲಿ 50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಶೇ. 24ರಷ್ಟು ಮೀಸಲಾತಿ ನೀಡಿ 2012ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ‘ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ 6 ಸಾವಿರ ಕೋಟಿ ರು. ಅನುದಾನ ನೀಡಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಪ್ಯಾಕೇಜ್ ಮೊತ್ತ 10 ಕೋಟಿ ರೂ. ನಿಗದಿಪಡಿಸಲಾಗಿದೆ.
ಅದೇ ರೀತಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 3.885 ಕೋಟಿ ಅನುದಾನ ನೀಡಿ ನಗರಸಭೆ ವ್ಯಾಪ್ತಿಯಲ್ಲಿ 1 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗಳಿಗೆ 25 ಲಕ್ಷ ರೂ. ತಾಲೂಕು ಮಟ್ಟದ ಕಾಮಗಾರಿಗಳಿಗೆ 1 ಕೋಟಿ ರೂ. ಪ್ಯಾಕೇಜ್ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದಾಗಿ ಎಸ್ಸಿ-ಎಸ್ಟಿ ಗುತ್ತಿಗೆದಾರರು ಕಾಮಗಾರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಬಿಬಿಎಂಪಿ, ನಗರಸಭೆ, ಪುರಸಭೆ ಹಾಗೂ ತಾಲೂಕು ಮಟ್ಟಕ್ಕೆ ಮೊತ್ತಕ್ಕೆ ಮಿತಿ ಹೇರಿ ಮತ್ತು ಪ್ಯಾಕೇಜ್ ನಿಗದಿಪಡಿಸಿ 2022ರ ಜ. 14 ಮತ್ತು ಮೇ 11ರಂದು ಹೊರಡಿಸಿರುವ ಸುತ್ತೋಲೆಗಳನ್ನು ರದ್ದುಪಡಿಸಬೇಕು. ಟೆಂಡರ್ ಕರೆಯಲು ಹಾಗೂ ಪ್ಯಾಕೇಜ್ ಮೊತ್ತ 50 ಲಕ್ಷ ಮೀರದಂತೆ ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಯೋಜನೆಯಡಿ ಅ. 4 ರಂದು ಕರೆಯಲಾಗಿರುವ ಅಲ್ಪಾವಧಿ ಟೆಂಡರ್ಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅಲ್ಲದೇ ಅರ್ಜಿಯು ಇತ್ಯರ್ಥವಾಗುವವರೆಗೆ ಸರ್ಕಾರದ ಎಲ್ಲ ಸುತ್ತೋಲೆಗಳಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.
ಓದಿ: ವಾಹನಗಳಲ್ಲಿ ಮೂವಿಂಗ್ ಗಾರ್ಡನ್ ಅಳವಡಿಸಲು ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್