ಬೆಂಗಳೂರು: ನಗರದಲ್ಲಿ ಭವಿಷ್ಯದ ದೃಷ್ಟಿಯಿಂದ ಮನೆ ನಿರ್ಮಿಸುವ ಕನಸು ಹೊತ್ತು ಕಾಯ್ದಿರಿಸಿದ್ದ ನಿವೇಶನ ಜಾಗವನ್ನೇ ಭೂಗಳ್ಳರು ಒತ್ತುವರಿ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಎಸ್ಸಿ ಎಸ್ಟಿ ಸಮುದಾಯದವರಿಗಾಗಿ ಕೆ.ಆರ್ ಪುರ ಕ್ಷೇತ್ರದ ಬಸವನಪುರ ವಾರ್ಡ್ನ ವೈಟ್ ಸಿಟಿಯಲ್ಲಿ ಬೆಮಲ್ ಕಾರ್ಮಿಕರ ಒಕ್ಕೂಟವು ಬಡಾವಣೆ ನಿರ್ಮಿಸಿತ್ತು. ಆದರೆ ಕಾರಣಾಂತರದಿಂದ ಮನೆ ನಿರ್ಮಿಸಲಾಗದೆ ಖಾಲಿ ಬಿಟ್ಟಿದ್ದ ಜಾಗವನ್ನ ಭೂಗಳ್ಳರು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಮಿಳುನಾಡು ಮೂಲದ ಕಲ್ಪನಾ ಮಾರಿಮುತ್ತು ಎಂಬುವರು ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆ 2,700 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದರು. ಆದರೆ ನಂತರ ಅನ್ಯ ಕಾರಣದಿಂದ ತಮಿಳುನಾಡಿನಲ್ಲಿ ನಲೆಸುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಖಾಲಿ ನಿವೇಶನದಲ್ಲಿ ವಿಖ್ಯಾತ್ ಇನ್ಫ್ರಾ ಮಾಲೀಕರಾದ ವಿಕ್ಯಾತ್ ಶ್ರೀಕಾಂತ್ ಪೊಡಪತಿ, ರೇಖಾ ಉಲಾವ್, ನೆಲ್ಲಬೊತು ಮತ್ತು ದಾಮೋದರ್ ಎಂಬುವರು ಅಪಾರ್ಟ್ಮೆಂಟ್ ಕಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ನಿವೇಶನ ಕಳೆದುಕೊಂಡ ಮಾರಿಮುತ್ತು ಮಾತನಾಡಿ, ನಾನು ಬೆಂಗಳೂರಿನಲ್ಲಿದ್ದಾಗ 2005ರಲ್ಲಿ ಬೆಮಲ್ ಎಸ್ಸಿ ಎಸ್ಟಿ ಒಕ್ಕೂಟವು ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ 2,700 ಅಡಿ ವಿಸ್ತೀರ್ಣವುಳ್ಳ ಜಾಗವನ್ನು ಖರೀದಿಸಿದ್ದೆ. ಆದರೆ 2007ರಲ್ಲಿ ವಿಖ್ಯಾತ್ ಬಿಲ್ಡರ್ಸ್ ನಮ್ಮ ಜಾಗವನ್ನು ಒತ್ತುವರಿ ಮಾಡಲು ಮುಂದಾದರು. ಹಾಗಾಗಿ ನಾನು ಕೋರ್ಟ್ ಮೊರೆ ಹೋಗಿ ಕೇಸ್ ದಾಖಲಿಸಿದ್ದೆ. ಕೇಸ್ ನಡೆಯುತ್ತಿದ್ದರೂ ಸಹ ತರಾತುರಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆ. ಬಿಲ್ಡರ್ಗಳು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದು, ಜೀವ ಭಯದಲ್ಲಿಯೇ ದಿನದೂಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.
ಈ ಬಗ್ಗೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ಬೆಂಗಳೂರಿನಲ್ಲಿ ಖಾಲಿಬಿಟ್ಟಿರುವ ನಿವೇಶನಗಳನ್ನು ಖಬ್ಜ ಮಾಡುವುದು ಕೆಲ ಭೂಗಳ್ಳರ ಕಸುಬಾಗಿದೆ. ಹೊರ ರಾಜ್ಯದಿಂದ ಬಂದ ಭೂಗಳ್ಳ ಬಿಲ್ಡರ್ಗಳು ಸ್ಥಳೀಯರ ಕುಮ್ಮಕ್ಕಿನಿಂದ ಅಮಾಯಕರ ಖಾಲಿ ನಿವೇಶನಗಳನ್ನು ಅತಿಕ್ರಮಿಸುತ್ತಿದ್ದಾರೆ. ಮಾರಿಮುತ್ತು ಕುಟುಂಬಕ್ಕೆ ಅಧಿಕಾರಿಗಳು ನ್ಯಾಯ ದೊರಕಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಚುರುಕು ಮುಟ್ಟಿಸಿದ ಕಲಬುರಗಿ ಪೊಲೀಸರು