ಬೆಂಗಳೂರು : ರೈಡ್ ಬುಕ್ ಮಾಡಿದ ಯುವತಿಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ನಗರದಲ್ಲಿ ಬೈಕ್ ಬುಕ್ ಮಾಡಿಕೊಂಡು ಬಳಿಕ ತೆರಳುವಾಗ ದಾರಿ ಉದ್ದಕ್ಕೂ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ರೈಡ್ ಮುಗಿದ ಬಳಿಕ ಅಸಂಬದ್ಧವಾಗಿ ಸಂದೇಶ ರವಾನಿಸುವ ಮೂಲಕ ರ‍್ಯಾಪಿಡೋ ಚಾಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿರುವ ಯುವತಿ ಟ್ವಿಟರ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯ ಖಂಡಿಸಿ ಶುಕ್ರವಾರ ಮಧ್ಯಾಹ್ನ ನಗರದ ಟೌನ್ ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಯುವತಿ ಬಂದಿದ್ದರು. ಬಳಿಕ ಟೌನ್ ಹಾಲ್ನಿಂದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ರ‍್ಯಾಪಿಡೋ ಆಟೋ ಬುಕ್ ಮಾಡಿದ್ದರು. ಆದರೆ, ಪದೇ ಪದೆ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ದುಕೊಂಡಿದ್ದರು. ಆ್ಯಪ್ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ ಎಂದಿದ್ದ ಚಾಲಕ ಬೇರೆ ಬೈಕಿನಲ್ಲಿ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈನಲ್ಲಿ ಚಾಲನೆ ಮಾಡುತ್ತ, ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಇಷ್ಟಾದರೂ ಸಹ ವಿಧಿ ಇಲ್ಲದೆ ಸುಮ್ಮನಿದ್ದ ಯುವತಿ, ಮನೆಗೆ 200 ಮೀಟರ್ ದೂರದಲ್ಲಿರುವಾಗಲೇ ರೈಡ್ ಮುಗಿಸಿ ಹಣ ಪಾವತಿಸಿ ಮನೆಗೆ ತೆರಳಿದ್ದಾರೆ. ಆದರೆ ಡ್ರಾಪ್ ಮಾಡಿದ ಬಳಿಕವೂ ಪದೇ ಪದೇ ಯುವತಿಗೆ ಕರೆ ಮಾಡಿದ್ದ ರ‍್ಯಾಪಿಡೋ ಚಾಲಕ ಅಸಂಬದ್ಧವಾಗಿ ಮೆಸೇಜ್ ಮಾಡಿದ್ದಾನೆ. ಆರೋಪಿಯ ಕಿರುಕುಳದಿಂದ ನೊಂದಿರುವ ಯುವತಿ, ಆತ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡುವ ಮೂಲಕ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ರ‍್ಯಾಪಿಡೋದ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಾರೆ. ಯುವತಿಯ ಟ್ವೀಟ್ ಗಮನಿಸಿರುವ ಬೆಂಗಳೂರು ನಗರ ಪೊಲೀಸರು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಕಿರುಕುಳ.. ಜಿಲ್ಲಾಧಿಕಾರಿಗೆ ವರದಿ, ಪ್ರಾಂಶುಪಾಲರ ವಿರುದ್ಧ ಫೋಕ್ಸೋ ಪ್ರಕರಣ