ಬೆಂಗಳೂರು: ದೀಪಾವಳಿ ಹಿನ್ನೆಲೆ ಮನೆಗೆ ವಿದ್ಯುತ್ ಅಲಂಕಾರ ಮಾಡಲು ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಂಗಳೂರು ನಗರ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಕುಮಾರ್ ಎಂಬುವವರು ನೀಡಿದ ದೂರು ಆಧರಿಸಿ ಜಯನಗರದ ಪೊಲೀಸ್ ಠಾಣೆಯಲ್ಲಿ (ಜಾಗೃತ ದಳ) ಪ್ರಕರಣ ದಾಖಲಿಸಿದೆ.

ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಜೆ.ಪಿ.ನಗರದ ನಿವಾಸಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಪಡೆಯಲು ಮನೆಯ ಪಕ್ಕದಲ್ಲಿರುವ ಕಂಬದಿಂದ ಅಕ್ರಮವಾಗಿ ವಿದ್ಯುತ್ ಬಳಸಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಸಹ ಟ್ವೀಟ್ ಮಾಡಿ ಅಕ್ರೋಶ ವ್ಯಕ್ತಪಡಿಸಿತ್ತು.
ಇದಕ್ಕೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದ ಎಚ್.ಡಿ.ಕುಮಾರಸ್ವಾಮಿ, "ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದರು.

ಅಲ್ಲದೇ, "ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ರಾಜ್ಯ ಕಾಂಗ್ರೆಸ್ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಸ್ಥಿತಿಯ ಬಗ್ಗೆ ನನಗೆ ಮರುಕ ಇದೆ" ಎಂದು ವ್ಯಂಗ್ಯವಾಡಿದ್ದರು.
"ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ" ಎಂದಿದ್ದರು.

ಅಲ್ಲದೇ, ಈ ಬಗ್ಗೆ ಮಾಧ್ಯಮಕ್ಕೂ ಪ್ರತಿಕ್ರಿಯಿಸಿದ ಹೆಚ್ಡಿಕೆ, "ದೇಶ ಮತ್ತು ರಾಜ್ಯ ಮುಳುಗಿ ಹೋಗುವಂತಹ ಕೆಲಸ ನಾನೇನು ಮಾಡಿಲ್ಲ. ಸರ್ಕಾರ ನೀತಿ ನಿಯಮಗಳ ಪ್ರಕಾರ ಏನು ದಂಡ ಕಟ್ಟಬೇಕೋ ಅದಕ್ಕೆ ನಾನು ಸಿದ್ಧ ಇದ್ದೇನೆ. ನೊಟೀಸ್ ಕೊಡಿ ಅಂತ ನಾನೇ ಕೇಳಿದ್ದೇನೆ. ನಾನೇ ಮುಗಿಸಿದ್ದೇನೆ. ವಿದ್ಯುತ್ ಕಳ್ಳತನ ಮಾಡುವ ದರಿದ್ರ ನನಗೆ ಬಂದಿಲ್ಲ. 2-3 ಸಾವಿರ ದರದ ವಿದ್ಯುತ್ ಕದಿಯಬೇಕಾ ನಾನು?. ಮನೆ ಹತ್ತಿರ ಬರುವವರಿಗೆ ನಾನು ಹಣ ನೀಡುತ್ತೇನೆ" ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಆಚಾತುರ್ಯ ಯಾರಿಂದಾದರೂ ನಾನೇ ಹೊಣೆ, ದಂಡ ಕಟ್ಟಲು ಸಿದ್ದನಿದ್ದೇನೆ: ಕುಮಾರಸ್ವಾಮಿ