ದೊಡ್ಡಬಳ್ಳಾಪುರ : ನಗರದಲ್ಲಿ ಬಿಜೆಪಿ ಮುಖಂಡರ ವಿದುದ್ದ ಜಾತಿ ನಿಂದನೆ ಮತ್ತು ಹಲ್ಲೆ ಆರೋಪ ಕೇಳಿ ಬಂದಿದೆ. ಈ ಘಟನೆ ಕುರಿತು ಹಲ್ಲೆಗೊಳಗಾದ ನಗರ ಸದಸ್ಯ ಬಿಜೆಪಿ ಮುಖಂಡರ ವಿರುದ್ಧ ದೂರು ದಾಖಲಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮಕ್ಕೆ ಜನ ಸೇರದಿದ್ದಕ್ಕೆ ಬಿಜೆಪಿಯ ಮುಖಂಡರು ಪಕ್ಷದ ಕಚೇರಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ದಲಿತ ಸಮುದಾಯದ ನಗರಸಭಾ ಸದಸ್ಯ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ ಗಲಾಟೆ ಉಂಟಾಗಿದೆ. ಈ ವೇಳೆ ಬಿಜೆಪಿಯ ಮುಖಂಡರು ಜಾತಿ ನಿಂದನೆ ಮಾಡಿದ್ದಲ್ಲದೆ ಅವರ ಅಂಗಿ ಹರಿದು ಹಾಕಿ, ಒದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಆರ್ ಶಿವಣ್ಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಓದಿ: ಪಿಎಸ್‌ಐ ಹಗರಣದ ತನಿಖೆ ಕುರಿತ ವಿಚಾರಣೆಯಿಂದ ಹಿಂದೆ ಸರಿದ ಮುಖ್ಯ ನ್ಯಾಯಮೂರ್ತಿ ಅವರಿದ್ದ ಪೀಠ
ದೊಡ್ಡಬಳ್ಳಾಪುರ ನಗರಸಭಾ ಸದಸ್ಯರಾದ ಆರ್ ಶಿವಣ್ಣ ಹಲ್ಲೆಗೊಳಗಾದವರು. ಇಲ್ಲಿನ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವಾಗ ಬಿಜೆಪಿಯ ಮುಖಂಡರಾದ ಬಿ ಜಿ ಶ್ರೀನಿವಾಸ್, ಆನಂದ ಮೂರ್ತಿ, ಮಧು ಬೇಗಲಿ ಮತ್ತು ನಾಗೇಶ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆ ನಡೆಸಿದ ಮೂವರ ವಿರುದ್ಧ ಶಿವಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ : ಜನವರಿ 23 ರಂದು ತಾಲ್ಲೂಕಿನ ಮಧುರೆಗೆ ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ವಿಜಯ ಸಂಕಲ್ಪ ಅಭಿಯಾನಕ್ಕೆ ಗ್ರಾಮಾಂತರ ಮಂಡಲದಲ್ಲಿ ಚಾಲನೆ ನೀಡಲು ಆಗಮಿಸಿದ್ದರು. ಆದರೆ ಈ ಬಗ್ಗೆ ನಗರದ ಮುಖಂಡರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿರಲಿಲ್ಲ. ಈ ವಿಷಯದ ಬಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಸಣ್ಣದೊಂದು ಸಭೆ ಕೈಗೊಳ್ಳಲಾಗಿತ್ತು. ಸಭೆಯಲ್ಲಿ ಈ ವಿಚಾರವನ್ನು ತಾಲ್ಲೂಕು ಅಧ್ಯಕ್ಷ ಅಥವಾ ನಗರ ಅಧ್ಯಕ್ಷರಾದವರು ಮುಖಂಡರಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ, ಇದ್ಯಾವುದೂ ಆಗದೇ ಇರುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ಶಿವಣ್ಣ ಹೇಳಿದ್ದರಂತೆ.
ಶಿವಣ್ಣ ಅವರ ಮಾತಿನಿಂದ ಕೋಪಗೊಂಡ ಬಿಜೆಪಿಯ ಕೆಲ ನಾಯಕರು ಆತನಿಗೆ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ಸಭೆಗೆ ನಿನ್ನನ್ನು ಸೇರಿಸುವುದೇ ಹೆಚ್ಚು ಎಂದು ಬಿಜಿ ಶ್ರೀನಿವಾಸ್, ಮಧು ಬೇಗಲಿ, ನಾಗೇಶ್ ಜೊತೆ ಆನಂದಮೂರ್ತಿ ಎಂಬಾತ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ, ಜಾತಿ ನಿಂದನೆ ಮಾಡಿ, ಅಂಗಿಯನ್ನು ಹರಿದುಹಾಕಿ, ಹಲ್ಲೆ ಮಾಡಿದ್ದಾರೆ ಎಂದು ಶಿವಣ್ಣ ಆರೋಪ ಮಾಡಿದ್ದಾರೆ. ಈ ಘಟನೆಯ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ