ಬೆಂಗಳೂರು: ಸರ್ಕಾರಿ ನೌಕರನೋರ್ವನ ಖಾಸಗಿ ವಿಡಿಯೋ ಇರುವುದಾಗಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಲಾಯರ್ ಜಗದೀಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೇರಿ ಮೂವರನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ಗಣಪತಿ ನಾಯಕ್, ಕಿಶನ್ ಮತ್ತು ಕೇಶವನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಪೈಕಿ ಗಣಪತಿ ನಾಯಕ್ ಲಾಯರ್ ಜಗದೀಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಲಾರದಲ್ಲಿ ಕೆಲಸ ಮಾಡುವ ಶಿರಸ್ತೆದಾರನಿಗೆ ಯುವತಿಯೊಬ್ಬಳ ಪರಿಚಯ ಆಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಯುವತಿ, ಇಬ್ಬರು ಸಲುಗೆಯಿಂದಿರುವ ವಿಡಿಯೋ ರೆಕಾರ್ಡ್ ಮಾಡಿ ಕಿಶನ್ ಎನ್ನುವವನಿಗೆ ನೀಡಿದ್ದಳು ಎನ್ನಲಾಗ್ತಿದೆ.
ಇದನ್ನೂ ಓದಿ: ಯಾದಗಿರಿ: ಭಾರಿ ಅಗ್ನಿ ಅವಘಡ, 112 ವಾಹನ ಸಿಬ್ಬಂದಿಯಿಂದ ನಾಲ್ವರ ರಕ್ಷಣೆ
ವಿಡಿಯೋ ವಾಟ್ಸಪ್ ಮಾಡಿ ಬ್ಲಾಕ್ ಮೇಲ್: ಶಿರಸ್ತೇದಾರನಿಗೆ ವಿಡಿಯೋ ವಾಟ್ಸಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಕಿಶನ್, ಗಣಪತಿ ನಾಯಕ್ 25 ಲಕ್ಷ ಹಣಕ್ಕೆ ಬೀಡಿಕೆ ಇಟ್ಟಿದ್ದರು. ಇಲ್ಲವಾದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದರು ಎನ್ನಲಾಗ್ತಿದೆ. ಇದರಿಂದ ಹೆದರಿದ ದೂರುದಾರ ಕೆ. ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಯುವತಿ ನಾಪತ್ತೆ: ದೂರಿನ ಅನ್ವಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಯುವತಿ ಪತ್ತೆಯಾಗಿಲ್ಲ. ಕೆ.ಆರ್.ಪುರಂ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
5 ದಿನ ಪೊಲೀಸ್ ಕಸ್ಟಡಿಗೆ: ಆರೋಪಿಗಳನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.