ಬೆಂಗಳೂರು: ''ಕೇವಲ ದ್ವೇಷದ ರಾಜಕಾರಣಕ್ಕಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ. ಕಾನೂನು ಪ್ರಕಾರವೇ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಮಾಡಿ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವತ್ತಿನ ಸಚಿವ ಸಂಪುಟದ ಎಲ್ಲ ನಿರ್ಧಾರಗಳೂ ಜನ ವಿರೋಧ ನಿರ್ಧಾರಗಳೇ ಆಗಿವೆ'' ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ ಇವತ್ತು ಅಧಿಕಾರಕ್ಕೆ ಬಂದಿದೆ. ಮತ್ತೆ ಅವರ ಹಳೆಯ ರೂಢಿಯಾದ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಪಠ್ಯ ಪುಸ್ತಕ ಬದಲಾವಣೆ ಮಾಡುತ್ತಿದ್ದಾರೆ. ಇವು ಪುಸ್ತಕನೂ ಓದಿಲ್ಲ. ಹೆಡ್ಗೇವಾರ್ ಪಠ್ಯದಲ್ಲಿ ಏನಿದೆ? ಸಾವರ್ಕರ್ ದೇಶದ್ರೋಹಿಯಾ? ಅವರ ಪಾಠ ಯಾಕೆ ತೆಗೆಯಬೇಕಿತ್ತು? ದ್ವೇಷ ಅಷ್ಟೇ, ಇವತ್ತಿನ ಸಚಿವ ಸಂಪುಟದ ಎಲ್ಲಾ ನಿರ್ಧಾರಗಳು ಜನ ವಿರೋಧಿ ಗ್ಯಾರಂಟಿ ಆಧಾರಿತವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗ ತುಷ್ಟೀಕರಣದ ರಾಜಕೀಯ ಮಾಡಲು ಹೊರಿಟಿದ್ದಾರೆ. ಜನರೇ ಇವರಿಗೆ ಪಾಠ ಕಲಿಸುತ್ತಾರೆ'' ಎಂದರು.
ಸಂಪುಟದ ನಿರ್ಧಾರವನ್ನು ಖಂಡಿಸಿದ ಬಿಜೆಪಿ: ''ಯಾವುದೋ ಆಸೆ ಆಮಿಷಕ್ಕೆ ಒಳಗಾಗಿ ಧರ್ಮ ಬದಲಿಸಬಾರದು ಎಂದು ಜನರ ಅಪೇಕ್ಷೆಯಂತೆ ಕಾನೂನಾತ್ಮಕವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಮಾಡಿತ್ತು. ಆದರೆ ಸಮಾಜದಲ್ಲಿ ಶಾಂತಿ ನೆಲೆಸೋದು ಕಾಂಗ್ರೆಸ್ಗೆ ಬೇಕಿಲ್ಲ. ಸಮಾಜದಲ್ಲಿ ಅಶಾಂತಿ, ಗಲಭೆ, ಗೊಂದಲ ಇರಬೇಕು ಅಂತ ಕಾಂಗ್ರೆಸ್ ಬಯಸಿದೆ, ನಾವು ಕಾನೂನು ಪ್ರಕಾರವೇ ಮತಾಂತರ ತಡೆ ಮಸೂದೆ ತಂದಿದ್ದೆವು, ಕಾಯ್ದೆಯಲ್ಲಿ ಲೋಪ ಏನೂ ಇರಲಿಲ್ಲ. ಆದರೂ ಈಗ ಮತಾಂತರ ತಡೆ ಕಾಯ್ದೆ ವಾಪಸ್ ತಗೋತಿದಾರೆ ಅಧಿಕಾರ ಅವರ ತಲೆಗೆ ಬಡಿದಿದೆ. ಇಂದಿನ ಸಂಪುಟದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ'' ಎಂದರು.
''ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರದಲ್ಲಿಯೂ ರೈತರಿಗೆ ಏನು ಅನುಕೂಲ ಆಗುತ್ತದೆ ಎಂದು ಚರ್ಚೆ ಮಾಡದೇ ತಿದ್ದುಪಡಿ ಮಾಡುತ್ತಿದಾರೆ. ರೈತರಿಗೆ ಏನು ಅನುಕೂಲ ಅಂತಾ ತಿಳಿದುಕೊಳ್ಳದೇ ಎಪಿಎಂಸಿ ಕಾಯ್ದೆ ಬದಲಾವಣೆಗೆ ಹೊರಟಿದ್ದಾರೆ. ಏನು ಬದಲಾವಣೆ ಅಂತಾ ಹೇಳದೇ ಇರುವುದಕ್ಕೆ ಅದು ಮನೆಯ ಖಾಸಗಿ ಗುಟ್ಟಾ? ಅದ್ಭುತವಾದ ಎಪಿಎಂಸಿ ಕಾಯ್ದೆಗೆ ಮಣ್ಣು ಹಾಕುತ್ತಿದ್ದಾರೆ. ಮೋಸದಲ್ಲಿ ಅಧಿಕಾರಕ್ಕೆ ಬಂದು ದುಡಿದು ಬದುಕುವ ಜನರ ಬಾಯಿಗೆ ಮಣ್ಣು ಹಾಕುವ ಸರ್ಕಾರ ಇದು ಜನಪರ ಕಾಯ್ದೆಯನ್ನು ಹಿಂಪಡೆದು ಅದಕ್ಕೆ ತಿದ್ದುಪಡಿ ತರ್ತಿದ್ದಾರೆ. ಕರ್ನಾಟಕ ಇಡೀ ದೇಶಕ್ಕೆ ಮಾದರಿ. ಬೆಳೆಗಾರನಿಂದ ಬಳಕೆದಾರನವರೆಗೂ ನೇರವಾಗಿ ತಲುಪಿಸೋ ವ್ಯವಸ್ಥೆ ಇತ್ತು. ಇದಕ್ಕೂ ಮಣ್ಣು ಹಾಕ್ತಿದಾರೆ. ರಾಜ್ಯದ ಜನರು, ದುಡಿದು ತಿನ್ನುವವರಿಗೂ ಮಣ್ಣು ಹಾಕೋಕೆ ಹೊರಟಿದ್ದಾರೆ. ಎಲ್ಲಾ ವಿಚಾರದಲ್ಲೂ ದುರಂತ. ಇದೊಂದು ನಾಶದ ಪಕ್ಷ'' ಎಂದು ಟೀಕಿಸಿದರು.
200 ಯೂನಿಟ್ ಫ್ರೀ ಕೊಡ್ತೀನೆಂದು ಡೋಂಗಿ ಮಾಡಿ ನಾಮ- ಅಶ್ವತ್ಥನಾರಾಯಣ: ''ಯಾರೋ ಬಂದು ಕಿವಿಯಲ್ಲಿ ಊದಿದರು ಸದನಕ್ಕೆ ಕಿವಿ ಮೇಲೆ ಇಟ್ಟುಕೊಂಡು ಬಂದ ಹೂವನ್ನು ಈಗ ತೆಗೆದು ಜನರಿಗೆ ಇಟ್ಟಿದ್ದಾರೆ. ಅನ್ನಭಾಗ್ಯದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಬಿಟ್ಟು ನೀವು ಹೇಳಿದ 10 ಕೆಜಿ ಕೊಡಿ. 200 ಯೂನಿಟ್ ಫ್ರೀ ಕೊಡ್ತೀನಿ ಅಂತಾ ಡೋಂಗಿ ಮಾತನಾಡಿ ನಾಮ ಎಳೆದುಬಿಟ್ರಲ್ಲಾ? ಅರ್ಜಿಯನ್ನೇ ಹಾಕದವನನ್ನು ಮೇಷ್ಟ್ರಾಗಿ ನೇಮಕ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಈಗಲಾದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಭಾಷೆ ಕಲಿತಿರುವುದೇ ಸಂತೋಷ, ನಿಮ್ಮನ್ನೂ ಸೇರಿಸಿ ತನಿಖೆ ಮಾಡಿದರೆ ಒಳ್ಳೆಯದು, ಸಚಿವ ಸಂಪುಟದಲ್ಲಿ ಎಲ್ಲಾ ನಿರ್ಧಾರ ಜನ ವಿರೋಧಿಯಾಗಿ ತೆಗೆದುಕೊಂಡಿದ್ದಾರೆ. ಜನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ರನ್ನು ಪ್ರೀತಿಸಿ ಅಧಿಕಾರ ಕೊಟ್ಟಿಲ್ಲ. ಗ್ಯಾರಂಟಿ ನೋಡಿ ಅಧಿಕಾರ ಕೊಟ್ಟಿದ್ದಾರೆ. ಈ ವಯಸ್ಸಿನಲ್ಲಿ ಯಾಕೆ ಮಾತಿಗೆ ತಪ್ಪುತ್ತೀರಾ? ಬಡವರು ಆಸೆಯಲ್ಲಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಮಾಡಬೇಡಿ ಎಲ್ಲರೂ ಕರೆಂಟ್ ಸ್ಟವ್ ತಗೊಂಡಿದಾರೆ. ಮೊದಲು ಅವರಿಗೆ ಕರೆಂಟ್ ಕೊಡಿ, ನಂತರ ಇವುಗಳಿಗೆಲ್ಲಾ ಕೈ ಹಾಕಿ'' ಎಂದು ಅಶ್ವತ್ಥನಾರಾಯಣ ಸರ್ಕಾರದ ಕಾಲೆಳೆದರು.
''ಕಾಂಗ್ರೆಸ್ನವರು ಮೊದಲು ಸಂವಿಧಾನದ ಪ್ರಸ್ತಾವನೆಯನ್ನು ಮೊದಲು ಚೆನ್ನಾಗಿ ಓದಲಿ, ಇವರಿಗೇನಾದರೂ ಪ್ರಸ್ತಾವನೆ ಅರ್ಥ ಆಗುತ್ತಾ? ಪ್ರಸ್ತಾವನೆಯ ಆಶಯವೇ ಇವರಿಗೆ ಗೊತ್ತಿಲ್ಲ, ಏನಾದರೂ ಅರ್ಥ ಆಗುತ್ತದಾ ಇವರಿಗೆ, ಅರ್ಥ ಆಗದವರೆಲ್ಲಾ ಬಂದು ಬಿಟ್ಟಿದ್ದಾರೆ, ಏನು ಮಾಡೋದು ನಮ್ಮ ದುರಂತ'' ಎಂದು ವ್ಯಂಗ್ಯವಾಡಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಡಾಡಿ ವಿರೋಧ: ಎಪಿಎಂಸಿ ಕಾಯ್ದೆ ವಾಪಸಾತಿಗೆ ಸಚಿವ ಸಂಪುಟ ನಿರ್ಧಾರಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಯ್ದೆ ವಾಪಸಾತಿ ರೈತರಿಗೆ ಮಾರಕ, ಇದರಿಂದ ಸ್ಪರ್ಧಾತ್ಮಕ ಬೆಲೆ ಪಡೆಯಲು ಸಾಧ್ಯವಿಲ್ಲ. ಇದು ರೈತ ವಿರೋಧಿ ಸರ್ಕಾರವಾಗಿದೆ. ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: Anti-Conversion Law: ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು.. ಎಪಿಎಂಸಿ ಕಾಯ್ದೆಗೂ ಬ್ರೇಕ್ ಹಾಕಿದ ಸರ್ಕಾರ