ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗೆ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಎಂದು ವೀರಶೈವ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಹಿಂದೆಲ್ಲ ಲಿಂಗಾಯತ ಸಮಾಜ ಕಾಂಗ್ರೆಸ್ ಜೊತೆಗೆ ಇಲ್ಲ ಎಂಬ ಕೊರಗಿತ್ತು. ಆ ಕೊರಗು ಈಗ ಇಲ್ಲ. ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಎಲ್ಲ ಸಮಾಜದವರ ಆಶೀರ್ವಾದವೂ ಇದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ತೊಂದರೆ:ಶಾಮನೂರು ಅತೃಪ್ತಿ: ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಹೇಳಿದ್ದು ನಿಜ. ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಶುಕ್ರವಾರ ರಾತ್ರಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿ. ಹೌದು, ಆ ರೀತಿಯಾಗಿ ಹೇಳಿದ್ದು ನಿಜ. ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಕಾರ್ಯಕ್ರಮ ಇತ್ತು. ಅಲ್ಲಿ ನನಗೆ ಹಾನಗಲ್ ಕುಮಾರಸ್ವಾಮಿಗಳ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಭಾಷಣ ಮಾಡಬೇಕಾದರೆ, ಇರತಕ್ಕಂತ ಸತ್ಯ ಹೇಳಿದ್ದೇನೆ ಎಂದು ತಿಳಿಸಿದರು.
ಕೆಲ ಅಧಿಕಾರಿಗಳಿಗೆ ಮುಖ್ಯವಾದ ಹುದ್ದೆಗಳು ಕೊಟ್ಟಿಲ್ವಾ ಎಂಬ ಪ್ರಶ್ನೆಗೆ ಶಾಮನೂರು ಅವರು, ಬಹಳ ಜನಕ್ಕೆ ಹುದ್ದೆಗಳು ಕೊಟ್ಟಿಲ್ಲ. ಅವರು ಬೆಂಗಳೂರಲ್ಲಿ ತಿರುಗಾಡುತ್ತಿದ್ದಾರೆ. ನಾನು ಈ ರೀತಿಯ ಹೇಳಿಕೆ ನೀಡಿಲ್ಲ ಎಂದು ಅಲ್ಲಗಳೆಯಲ್ಲ. ಬಹಳ ಜನರಿಗೆ ಅನುಕೂಲತೆ ಆಗಿಲ್ಲ. ಒಟ್ಟು ಸಮಾಜಕ್ಕೆ ತೊಂದರೆಯಾಗಿದೆ. ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ. ನಾನು ಕ್ಯಾಬಿನೆಟ್ನಲ್ಲಿ ಇಲ್ಲ. ಬರಿ ಎಂಎಲ್ಎ ಆಗಿರುವುದು. ನಾನು ಯಾವ ಮಂತ್ರಿಗಳನ್ನೂ ಕೇಳಲು ಹೋಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಇದೇ ವೇಳೆ, ಲಿಂಗಾಯತ ಸಿಎಂ ಕುರಿತು ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಿಎಂ ವೀರೇಂದ್ರ ಪಾಟೀಲರು ಇದ್ದರು. ಅವರ ಕಾಲದಲ್ಲಿ ನಾವು ಆಡಳಿತ ಮಾಡಿದ್ದೇವೆ. ನಮ್ಮವರನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಈಗೆಲ್ಲ ನಮ್ಮವರು ಕಂಗಾಲಾಗಿದ್ದಾರೆ. ಡಿಸಿಎಂ ತೆಗೆದುಕೊಂಡು ಏನ್ ಮಾಡೋದು. ಆದರೆ, ಸಿಎಂ ಆಗಬೇಕು. ಅದಕ್ಕೆ ನಮ್ಮ ಬೇಡಿಕೆ ಇದ್ದೇ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ಸ್ವಾಭಿಮಾನ ಬದಿಗಿಟ್ಟು ಬಿಜೆಪಿ ಜೆಡಿಎಸ್ ಮೈತ್ರಿ, ಬಿಎಸ್ವೈ ಜೈಲಿಗೆ ಹೋಗಲು ಎಚ್ ಡಿ ಕುಮಾರಸ್ವಾಮಿ ಕಾರಣ: ಶಾಸಕ ಸವದಿ