ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು ಯಾವ ನೈತಿಕತೆ ಮೇಲೆ ಸ್ಪರ್ಧಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕನಾಥ್ ಪ್ರಶ್ನಿಸಿದ್ದಾರೆ.
ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆ ಸಮೀಪಿಸುತ್ತಿದೆ. ಹಿಂದೆಂದೂ ಕಾಣದಷ್ಟು ತೀವ್ರ ಸ್ಪರ್ಧೆ ಈ ಸಲ ಕಂಡು ಬಂದಿದೆ.
ಇದೇ ತಿಂಗಳು 17ನೇ ತಾರೀಖಿನಂದು ಚುನಾವಣಾ ಅಖಾಡಕ್ಕೆ ಇಳಿದು ಬಹಿರಂಗವಾಗಿ ಪ್ರಚಾರವನ್ನು ಘೋಷಿಸುತ್ತಿರುವ ಹಿರಿಯ ವಕೀಲರು, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಬ್ರಾಹ್ಮಣ ಸಮಾಜದ ಮುಖಂಡರಾದ ಅಶೋಕ್ ಹಾರನಹಳ್ಳಿ ಅವರು ಬೃಹತ್ ಸಭೆಯನ್ನು ಸಹ ಏರ್ಪಡಿಸಿದ್ದಾರೆ.
ಈ ಸಭೆಯ ಉಪಸ್ಥಿತಿ ಹಾಗೂ ಅಧ್ಯಕ್ಷತೆಯನ್ನು ಬಸವನಗುಡಿ ಕ್ಷೇತ್ರದ ಶಾಸಕರಾದ ರವಿಸುಬ್ರಹ್ಮಣ್ಯ ಅವರು ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಕೆಲವು ಪ್ರಶ್ನೆಗಳು ಮೂಡಿ ಬಂದಿವೆ ಎಂದರು.
ಇತ್ತೀಚಿಗಷ್ಟೇ ಹಾಸನದ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರು ಮಲೆನಾಡು ಎಜುಕೇಶನಲ್ ಟ್ರಸ್ಟ್ ವಿಷಯವಾಗಿ ಅಶೋಕ್ ಹಾರನಹಳ್ಳಿ ಅವರನ್ನು ಸೇರಿಸಿ ಆರು ಜನ ಸದಸ್ಯರ ಮೇಲೆ ವಿವಿಧ ಕಾನೂನಿನ ಅಡಿಯಲ್ಲಿ ಕೇಸನ್ನು ದಾಖಲಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ. ಯಾವ ನೈತಿಕತೆಯ ಕಾರಣಕ್ಕಾಗಿ ವೆಂಕಟನಾರಾಯಣ ಅವರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ರಾಜೀನಾಮೆ ಕೊಡಬೇಕಾಗಿತ್ತೋ ಅದೇ ನೈತಿಕತೆ ಅಶೋಕ ಹಾರನಹಳ್ಳಿ ಅವರಿಗೆ ಅನ್ವಯಿಸುವುದಿಲ್ಲವೇ? ಎಂದು ಶಂಕರ್ ಗುಹಾ ದ್ವಾರಕನಾಥ್ ಪ್ರಶ್ನೆ ಮಾಡಿದ್ದಾರೆ.
ಬ್ರಾಹ್ಮಣರ ಕಣ್ಣೀರಿಗೆ ಕಾರಣರಾದವರು : ಅವರ ವೃತ್ತಿಧರ್ಮಕ್ಕನುಗುಣವಾಗಿ ಯಾವ ಕಕ್ಷಿದಾರರನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು ಎಂಬುದನ್ನು ಸ್ವ ಇಚ್ಛೆಯಿಂದ ತೀರ್ಮಾನಿಸಬಹುದು. ಆದರೂ ಅನ್ಯಾಯಕ್ಕೊಳಗಾದ ಜನರ ಪರ ನಿಂತು ಅವರಿಗೆ ನ್ಯಾಯ ಕೊಡಿಸುವುದರ ಬದಲು ಬಸವನಗುಡಿ ಕ್ಷೇತ್ರದ ಬಹುತೇಕ ಬ್ರಾಹ್ಮಣರ ಕಣ್ಣೀರಿಗೆ ಕಾರಣರಾದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನ ಅತಿದೊಡ್ಡ ಸುಸ್ಥಿದಾರ ರಘುನಾಥ್(ಸುಮಾರು 200ಕೋಟಿ ಸಾಲ)ರ ಪರ ವಕಾಲತ್ತು ವಹಿಸಿದ್ದಾರೆ.
ಆರೋಪಿಗಳ ಪರ ಸಂಸದ ತೇಜಸ್ವಿ ಸೂರ್ಯ : ವಂಚನೆಗೊಳಗಾದ ಬಸವನಗುಡಿ ಕ್ಷೇತ್ರದ ಜನರ ಪರ ನಿಲ್ಲಬೇಕಾದ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ಮತ್ತು ಅವರ ಅಣ್ಣನ ಮಗ ಹಾಗೂ ಸ್ಥಳೀಯ ಸಂಸದರಾದ ತೇಜಸ್ವಿ ಸೂರ್ಯ ಅವರು ಆರೋಪಿಗಳ ಪರ ವಕಾಲತ್ತು ವಹಿಸಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವುದು ಆಶ್ಚರ್ಯ ಮತ್ತು ಆಘಾತ ಉಂಟು ಮಾಡಿದೆ.
ಬಸವನಗುಡಿ ಕ್ಷೇತ್ರದಲ್ಲಿ ಎರಡು ಸಹಕಾರಿ ಸಂಸ್ಥೆಗಳು ಹಗರಣದಿಂದ ಸುಮಾರು 50 ಸಾವಿರ ಜನ ತೊಂದರೆಗೊಳಗಾಗಿದ್ದಾರೆ. ಜನಪ್ರತಿನಿಧಿಗಳು ಜನರ ಪರ ನಿಲ್ಲುವ ಬದಲು ಆರೋಪಿಗಳ ಪರ ನಿಂತವರ ಬೆಂಬಲಕ್ಕೆ ನಿಂತಿರುವುದು ಖಂಡನೀಯ ಎಂದು ಬೇಸರ ಹೊರ ಹಾಕಿದರು.
ರವಿಸುಬ್ರಹ್ಮಣ್ಯ, ತೇಜಸ್ವಿ ಸೂರ್ಯ ಅವರು ಅಶೋಕ್ ಹಾರನಹಳ್ಳಿ ಅವರ ಬೆಂಬಲಕ್ಕೆ ನಿಂತಿರುವುದರ ಹಿಂದೆ ದೊಡ್ಡ ಪಿತೂರಿಯೇ ಇದ್ದಂತಿದೆ. ಮೇಲ್ನೋಟಕ್ಕೆ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಈ ಮೂರೂ ಸಂಸ್ಥೆಗಳ ವಿಚಾರದಲ್ಲಿ ಈ ಮೂವರೇ ಸಾಮಾನ್ಯವಾಗಿ ಕಂಡು ಬರುತ್ತಾರೆ ಎಂದರು.
36 ಕೋಟಿ ಸಾಲಕ್ಕೆ ಲೆಕ್ಕಪತ್ರ ಇಲ್ಲ : ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಟ್ಟಡದ ನೆಲಮಹಡಿಯಲ್ಲಿರುವ ಶ್ರೀ ಆದಿತ್ಯ ಪ್ರಿಂಟರ್ಸ್ 36 ಕೋಟಿ ಸಾಲಕ್ಕೆ ಲೆಕ್ಕಪತ್ರ ಇಲ್ಲದಿರುವುದು ಎಲ್ಲರಿಗೂ ತಿಳಿದ ವಿಷಯವೇ.. ಈ ಪ್ರಿಂಟಿಂಗ್ ಪ್ರೆಸ್‌ನ ಮಾಲೀಕರು ಹಾಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ಪ್ರಭಾಕರ್ ಅವರ ಸಹೋದರ ಕೆ ಸಿ ಪ್ರಕಾಶ್, ಕೆ ಸಿ ಪ್ರಭಾಕರ್‌ರವರ ಮೇಲೂ ಕೇಸ್ ದಾಖಲಾಗಿದ್ದರೂ ಅವರಿನ್ನೂ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಕಾನೂನುಬಾಹಿರ ಎಂದು ಹರಿಹಾಯ್ದರು.
ಜನಪ್ರತಿನಿಧಿಗಳಾದ ರವಿಸುಬ್ರಹ್ಮಣ್ಯ ಮತ್ತು ತೇಜಸ್ವಿ ಸೂರ್ಯ ಜನಸಾಮಾನ್ಯರಿಗೆ ಸ್ಪಷ್ಟವಾಗಿ ತಾವು ಯಾರ ಪರ ಇದ್ದೇವೆ ಎಂಬುದನ್ನು ತಿಳಿಸಬೇಕಿದೆ. ಇನ್ನು, ಹಿರಿಯ ವಕೀಲರು ಹಾಗೂ ಕಾನೂನು ಪಂಡಿತರಾದ ಅಶೋಕ್ ಹಾರನಹಳ್ಳಿ ಅವರು ಮಾಡುತ್ತಿರುವ ಕಾರ್ಯ ಸರಿಯೋ-ತಪ್ಪೋ ಎಂಬುದನ್ನು ಅವರಿಗೆ ಅವರೇ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.