ಬೆಂಗಳೂರು: ಮೂವತ್ತೆಂಟು ದಿನಗಳ ಬಳಿಕ ಲಾಕ್ಡೌನ್ ಸಡಿಲಿಕೆ ಮಾಡಿದ್ರೂ, ಎಲ್ಲ ಹೋಟೆಲ್ಗಳ ಬಾಗಿಲು ತೆರೆದಿಲ್ಲ. ಏಕೆಂದರೆ ಪಾರ್ಸಲ್ ನೀಡುವುದರಿಂದ ಅದು ಲಾಭದಾಯಕವಲ್ಲ ಜೊತೆಗೆ ಹೋಟೆಲ್ ಕಾರ್ಮಿಕರು ಕೂಡ ಊರಿಗೆ ತೆರಳಿದ್ದಾರೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹೋಟೆಲ್ ಉದ್ಯಮಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಕೇವಲ ಪಾರ್ಸಲ್ಗೆ ಅವಕಾಶ ಇರುವುದರಿಂದ ಹೆಚ್ಚಿನ ಗ್ರಾಹಕರೂ ಸಿಗುತ್ತಿಲ್ಲ. ಅಲ್ಲದೇ ಕಾರ್ಮಿಕರ ಸಮಸ್ಯೆ ಕೂಡ ಆಗಿದೆ. ಸರ್ಕಾರದ ಆದೇಶದಂತೆ ಹೆಚ್ಚಿನ ಕಾರ್ಮಿಕರು ತವರು ಜಿಲ್ಲೆ, ರಾಜ್ಯಗಳಿಗೆ ಮರಳಿರುವುದರಿಂದ ಹೋಟೆಲ್ ಉದ್ಯಮದ ಕೆಲಸಕ್ಕೆ ಅಡಚಣೆಯಾಗಿದೆ. ಕೇವಲ ಪಾರ್ಸೆಲ್ ವ್ಯವಸ್ಥೆಯಿಂದ ಹೋಟೆಲ್ ಮಾಲೀಕರಿಗೆ ಯಾವುದೇ ರೀತಿಯ ಲಾಭವಾಗುವುದಿಲ್ಲ. ಗ್ರಾಹಕರ ದಿನನಿತ್ಯದ ಊಟ ತಿಂಡಿಗಾಗಿ ಸೇವೆ ಸಲ್ಲಿಸುತ್ತಿದ್ದೇವೆ ಅಷ್ಟೆ. ಪಾರ್ಸಲ್ ನೀಡುವ ಅವಧಿಯನ್ನು ರಾತ್ರಿ ಒಂಭತ್ತು ಗಂಟೆಯವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ವಿದ್ಯುತ್ನ ಫಿಕ್ಸೆಡ್ ದರವನ್ನು ಬದಲಾಯಿಸಬೇಕಿದೆ. ಬಿಲ್ ಬಿಬಿಎಂಪಿ ಆಸ್ತಿತೆರಿಗೆಯನ್ನು ಕಡಿಮೆ ಮಾಡಬೇಕಿದೆ. ಉದ್ಯಮದ ಪರವಾನಗಿಯ ಶೇಕಡ ಐವತ್ತರಷ್ಟು ರಿಯಾಯಿತಿ ನೀಡಬೇಕು. ಅದೇ ರೀತಿ ಕಾರ್ಮಿಕರ ವೇತನದ ವಿಚಾರದಲ್ಲೂ ನಿಯಮ ಸಡಿಲಿಸಬೇಕು. ಮದುವೆಯಲ್ಲಿ ಐವತ್ತು ಜನರನ್ನು ಸೇರಿಸಲು ಅನುಮತಿ ಇರುವಂತೆ ಹೋಟೆಲ್ಗಳಿಗೂ ಐವತ್ತು ಜನರಿಗೆ ಊಟ ತಿಂಡಿ ಕೊಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಒಟ್ಟಾರೆಯಾಗಿ ಲಾಕ್ಡೌನ್ ಮುಗಿದ ನಂತರವೂ ಕಾರ್ಮಿಕರ ಕೊರತೆಯ ಜೊತೆಗೆ ಜನರು ಹೋಟೆಲ್ಗಳಿಗೆ ಹೋಗಿ ತಿನ್ನುವುದಕ್ಕೆ ಹೆದರಿರುವ ಕಾರಣ ಹೋಟೆಲ್ ಉದ್ಯಮ ಚಿಂತೆಯಲ್ಲಿದೆ.