ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಇರುವ 50% ಬೆಡ್ಗಳನ್ನ ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು, ಕಾರ್ಪೋರೇಟ್ ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಇತ್ಯಾದಿಗಳನ್ನು ಬಳಸಿಕೊಳ್ಳಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಮರ್ಥ್ಯ ಹಾಗೂ ಸೌಲಭ್ಯ ಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳ ಶೇಕಡಾ 50ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಆದ ಸೋಂಕಿತರಿಗೆ ಮೀಸಲಿಡಲು ಸರ್ಕಾರ ಆದೇಶ ಮಾಡಿದೆ.
ಇನ್ನುಳಿದ ಶೇಕಡ 50ರಷ್ಟು ಹಾಸಿಗೆಗಳನ್ನು ಖಾಸಗಿ ಆರೋಗ್ಯ ಪೂರೈಕೆದಾರರು ಬೇರೆ ರೋಗಿಗಳಿಗೆ ಮತ್ತು ವಿಮಾ ರೋಗಿಗಳಿಗೆ ಬಳಸಿಕೊಳ್ಳಬಹುದಾಗಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರಲ್ ಪಡೆದು ಖಾಸಗಿ ಆಸ್ಪತ್ರೆಗೆ ಹೋಗುವ ಸೋಂಕಿತರಿಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಯ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ಇಚ್ಛಿಸುವ ರೋಗಿಗಳು ಚಿಕಿತ್ಸೆಯ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ನೇತ್ರ ಚಿಕಿತ್ಸಾ ಆಸ್ಪತ್ರೆಗಳು ಮತ್ತು ದಂತ ಆರೈಕೆ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಅಧಿಸೂಚಿತಗೊಳಿಸಿರುವುದಿಲ್ಲ. ಎಲ್ಲಾ ಖಾಸಗಿ ಆಸ್ಪತ್ರೆಗಳು, ಕಾರ್ಪೋರೇಟ್ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಹಾಸಿಗೆಗಳನ್ನು ಸರ್ಕಾರದೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.