ಬೆಂಗಳೂರು: ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಆಯಾ ಮತಗಟ್ಟೆಗಳ ಇವಿಎಂ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ಗಳಿಗೆ ರವಾನಿಸಲಾಗಿದೆ. ಅದರಂತೆ ಬೆಂಗಳೂರಿನ ಮೂರು ಕ್ಷೇತ್ರಗಳ ಚುನಾವಣೆ ಕೂಡ ಮುಗಿದಿದ್ದು, ಮತದಾನ ನಡೆದ ಬೂತ್ಗಳಿಂದ ಇವಿಎಂ ಮತಯಂತ್ರಗಳನ್ನು ಸ್ಟೀಲ್ ಬಾಕ್ಸ್ಗಳಲ್ಲಿಟ್ಟು ಸೀಜ್ ಮಾಡಲಾಗಿದೆ.
ಉತ್ತರ ಲೋಕಸಭಾ ಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಕೇಂದ್ರ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಮೌಂಟ್ ಕಾರ್ಮೇಲ್ ಮಹಿಳಾ ಪಿಯು ಕಾಲೇಜು, ದಕ್ಷಿಣ ಲೋಕಸಭಾ ಕ್ಷೇತ್ರ ಮತಯಂತ್ರಗಳನ್ನು ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜಿನ ಸ್ಟ್ರಾಂಗ್ ರೂಮ್ನಲ್ಲಿ ಇರಿಸಲಾಗಿದೆ. ಇದಕ್ಕೆ ಪೊಲೀಸರ ಸರ್ಪಗಾವಲು ಒದಗಿಸಲಾಗಿದೆ. ಇನ್ನು ಸ್ಟ್ರಾಂಗ್ ರೂಮ್ಗಳ ಮೇಲೆ ಮೇ 23ರತನಕ ತೀವ್ರ ನಿಗಾ ವಹಿಸಲಾಗುತ್ತದೆ. ಚುನಾವಣಾ ಗೈಡ್ಲೈನ್ಸ್ ಪ್ರಕಾರ ಮೂರು ಹಂತದಲ್ಲಿ ಭದ್ರತೆ ನೀಡಲಾಗುತ್ತಿದೆ.
24 ಗಂಟೆಗಳ ಕಾಲ ಇವಿಎಂ ಮತಯಂತ್ರಗಳ ಬಳಿ ಪ್ಯಾರಾ ಮಿಲಿಟರಿ ಪಡೆ ಸೇರಿದಂತೆ ಕ್ಯಾಂಪಸ್ ಸುತ್ತಾ ಹಿರಿಯ ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಒಂದು ವೇಳೆ ಯಾರಾದರೂ ಹೋಗಬೇಕೆಂದರೆ ಚುನಾವಣಾಧಿಕಾರಿಗಳ ಅನುಮತಿ ತೆಗೆದುಕೊಳ್ಳಬೇಕು.