ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಇರಲಿದ್ದು, ಕೆ.ಎನ್.ರಾಜಣ್ಣನವರೇ ಟಿ.ಬಿ.ಜಯಚಂದ್ರ ಅವರ ಹೆಸರು ಸೂಚಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಕೆ.ಎನ್.ರಾಜಣ್ಣನವರ ಅಭಿಪ್ರಾಯವನ್ನು ನಾವು ಪಡೆದಿದ್ದೇವೆ. ನಮ್ಮ ವರಿಷ್ಠರಿಗೆ ಈ ಅಭಿಪ್ರಾಯವನ್ನು ಕಳಿಸಿಕೊಡುತ್ತೇವೆ. ಇಂದಿನಿಂದಲೇ ಚುನಾವಣೆ ಕಾರ್ಯ ಪ್ರಾರಂಭ ಮಾಡಲಿದ್ದು, ನಾವೆಲ್ಲರೂ ಅವರಿಗೆ ಸಾಥ್ ನೀಡುತ್ತೇವೆ. ಕ್ಷೇತ್ರದ ಹಿತದೃಷ್ಟಿಯಿಂದ ನಾವೆಲ್ಲರೂ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿದ್ದೇವೆ. ಶಿರಾ ಉಪ ಚುನಾವಣೆಯನ್ನು ಪರಮೇಶ್ವರ್ ನೇತೃತ್ವತ್ವದಲ್ಲಿ ನಡೆಸ್ತೇವೆ. ಕೆ.ಎನ್.ರಾಜಣ್ಣ ಕೋ ಚೇರ್ಮನ್ ಆಗಿ ಸಾಥ್ ನೀಡಲಿದ್ದಾರೆ. ಒಟ್ಟಿಗೆ ಪಕ್ಷದವರೆಲ್ಲರೂ ಸೇರಿಯೇ ಚುನಾವಣೆ ಎದುರಿಸುತ್ತೇವೆ ಎಂದರು.
ಕೆ.ಎನ್.ರಾಜಣ್ಣ ಮಾತನಾಡಿ, ಅಧ್ಯಕ್ಷರ ಅಭಿಪ್ರಾಯಕ್ಕೆ ನಾವೆಲ್ಲರೂ ಸಾಥ್ ನೀಡುತ್ತೇವೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.