ಬೆಂಗಳೂರು: ಆಲ್ ಇಂಡಿಯಾ ಬಾರ್ ಕೌನ್ಸಿಲ್ ಎಕ್ಸಾಮಿನೇಷನ್ (ಎಐಬಿಇ) 15ರ ಫಲಿತಾಂಶವನ್ನು ಭಾರತೀಯ ವಕೀಲರ ಪರಿಷತ್ತು(ಬಿಸಿಐ) ಮತ್ತೆ ಮುಂದೂಡಿದೆ. ಇದೇ ವೇಳೆ ಎಐಬಿಇ-16 ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದೆ.
ಕಳೆದ ಜನವರಿ 24ರಂದು ನಡೆದಿದ್ದ ಎಐಬಿಇ-15ರ ಪರೀಕ್ಷೆಯ ಫಲಿತಾಂಶವನ್ನು ಮೊದಲಿಗೆ ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸದ ಬಿಸಿಐ ಮಾರ್ಚ್ 3ನೇ ವಾರದಲ್ಲಿ ಫಲಿತಾಂಶ ಹೊರ ಬಿಡುವುದಾಗಿ ಸ್ಪಷ್ಟನೆ ನೀಡಿತ್ತು. ಇದೀಗ 3ನೇ ಬಾರಿ ಪರೀಕ್ಷಾ ಫಲಿತಾಂಶ ಮುಂದೂಡಿದ್ದು, ಮಾರ್ಚ್ 4ನೇ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದರಿಂದಾಗಿ ಪರೀಕ್ಷಾ ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಿರುವ ಒಂದೂವರೆ ಲಕ್ಷಕ್ಕೂ ಅಧಿಕ ಯುವ ವಕೀಲರಿಗೆ ನಿರಾಸೆಯಾಗಿದೆ.
ಇಂದು ಬೆಳಗ್ಗೆ ಬಿಸಿಐ ಪ್ರಕಟಣೆ ಹೊರಡಿಸಿದ್ದ, ಫರೀಕ್ಷಾ ಫಲಿತಾಂಶವನ್ನು ಈ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ, ಎಐಬಿಇ-16 ಪರೀಕ್ಷೆ ತೆಗೆದುಕೊಳ್ಳುವ ಕಾಲಾವಕಾಶವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದ್ದು, ಪರೀಕ್ಷಾ ಶುಲ್ಕ ಪಾವತಿಗೆ ಏಪ್ರಿಲ್ 2ರವರೆಗೆ ಸಮಯ ವಿಸ್ತರಿಸಿದೆ. ಪರೀಕ್ಷಾ ದಿನಾಂಕ ಈ ಮೊದಲು ಪ್ರಕಟಿಸಿದಂತೆ ಏಪ್ರಿಲ್ 25 ರಂದು ನಡೆಯಲಿದೆ.
ಎಐಬಿಇ-16ನೇ ಪರೀಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊದಲಿನಂತೆ ಪುಸ್ತಕ, ನೋಟ್ಸ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಬದಲಿಗೆ ಬೇರ್ ಆ್ಯಕ್ಟ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಬಳಸಬಹುದಾಗಿದೆ ಎಂದು ಬಿಸಿಐ ಸ್ಪಷ್ಟಪಡಿಸಿದೆ.
ಕಳೆದ ಜನವರಿ 24ರಂದು ದೇಶದ 45 ನಗರಗಳ 150ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಎಐಬಿಇ ಪರೀಕ್ಷೆಗೆ 1.20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಕಾನೂನು ಪದವಿ ಪೂರೈಸಿ ಪರಿಷತ್ತುಗಳಲ್ಲಿ ವಕೀಲರಾಗಿ ನೋಂದಾಯಿಸಿಕೊಂಡವರು ಕಕ್ಷೀದಾರರ ಪರ ವಕಾಲತ್ತು ಹಾಕಲು ಈ ಪರೀಕ್ಷೆ ಪಾಸ್ ಮಾಡುವುದು ಕಡ್ಡಾಯವಾಗಿದೆ.