ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಹೊಸ ಚಿಂತನೆಗಳಿಗೆ ವೇದಿಕೆ ಕಲ್ಪಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಆ. 21ರಂದು 'ಕೃಷಿ ಸ್ಟಾರ್ಟ್ಅಪ್' ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
“ವರ್ಚುವಲ್ ಮೋಡ್ ಆನ್ಲೈನ್" ಮೂಲಕ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಸಾವಯವ ಹಾಗೂ ಸಿರಿ ಧಾನ್ಯಗಳು, ಆಹಾರ ಸಂಸ್ಕರಣಾ ಉದ್ದಿಮೆಗಳ ವ್ಯಾಪ್ತಿ ಹಾಗೂ ಅವಕಾಶಗಳು, ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿ ಕುರಿತು ಮಾಹಿತಿ ವಿನಿಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ನ ಮಹತ್ವ, ರೈತರಿಗಾಗುವ ಲಾಭ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳ 100ಕ್ಕೂ ಹೆಚ್ಚಿನ ಕೃಷಿ ಸ್ಟಾರ್ಟ್ಅಪ್ ಉದ್ದಿಮೆಗಳು, ಹೂಡಿಕೆದಾರರು ಭಾಗವಹಿಸಲಿದ್ದಾರೆ. ದೇಶದಲ್ಲಿ ಹತ್ತು ವರ್ಷಗಳಿಂದ ವಾರ್ಷಿಕವಾಗಿ ಸುಮಾರು 6 ಬಿಲಿಯನ್ ಡಾಲರ್ ಮೊತ್ತದ ಬಂಡವಾಳವನ್ನು ನವೋದ್ಯಮದಲ್ಲಿ ಹೂಡಿಕೆ ಮಾಡಲಾಗಿದೆ. ಕೃಷಿ ಮಾರುಕಟ್ಟೆ ಕ್ರಾಂತಿಗೆ ಸ್ಟಾರ್ಟ್ಅಪ್ ಬಹುಮುಖ್ಯ ವೇದಿಕೆಯಾಗಲಿದ್ದು, ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಅಧಿಕ ಉತ್ಪಾದನೆಯ ಸಮಸ್ಯೆ ನಿವಾರಣೆಗೆ ಮಾರುಕಟ್ಟೆ ಕ್ರಾಂತಿ ತರಲು ನವೋದ್ಯಮ (ಸ್ಟಾರ್ಟ್ಅಪ್)ಗಳನ್ನು ಪ್ರೋತ್ಸಾಹಿಸಲು ಕೃಷಿ ಸಚಿವರು ಹೆಜ್ಜೆ ಇಟ್ಟಿದ್ದಾರೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು, ಗ್ರಾಹಕರು ನೀಡುವ ಬೆಲೆ ರೈತರಿಗೆ ಸಿಗುವಂತೆ ಮಾಡಲು ಸ್ಟಾರ್ಟ್ಅಪ್ ನೆರವಾಗಲಿದೆ. ಜತೆಗೆ ರೈತರಿಗೆ ಉತ್ತಮ ಸಂಪರ್ಕ ಕಲ್ಪಿಸುವ ವೇದಿಕೆಯೂ ಆಗಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಅಗ್ರಿಟೆಕ್ ಸ್ಟಾರ್ಟ್ಅಪ್ಗಳಿಗೆ 2020ನೇ ಸಾಲಿನಲ್ಲಿ 4.5 ಬಿಲಿಯನ್ ಡಾಲರ್ ಮೊತ್ತದ ಮಾರುಕಟ್ಟೆ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕಾರ್ಯಾಗಾರದಲ್ಲಿ ಸ್ಟಾರ್ಟ್ಅಪ್ ಉದ್ದಿಮೆದಾರರ ಜೊತೆ ಚರ್ಚಿಸಿ ವ್ಯಕ್ತವಾಗುವ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಕೃಷಿ ಮಾರುಕಟ್ಟೆ, ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.