ಬೆಂಗಳೂರು : ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಈಗಿರುವ ಎಪಿಎಂಸಿಯನ್ನು ಮುಚ್ಚುವುದಿಲ್ಲ. ಈ ಮಸೂದೆಯನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಪರಿಷತ್ ಸದಸ್ಯ ರವಿಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಬೆಳೆ ನನ್ನ ಹಕ್ಕು’ ಮಧ್ಯವರ್ತಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ತಪ್ಪಿಸಿದೆ. ಈ ಕಾಯ್ದೆಗೆ ನಮ್ಮ ಬೆಂಬಲ ಇದೆ ಎಂದರು.
ಕೇಂದ್ರ ಸರ್ಕಾರ ಕೃಷಿ ಪರ ವಿಧೇಯಕ ಮಂಡನೆ ಮಾಡಿ ಬಿಲ್ ಪಾಸಾಗಿರುವುದು ಐತಿಹಾಸಿಕ ನಿರ್ಣಯ. ಇದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದಂತಾಗಿದೆ. ಎಪಿಎಂಸಿ ಮೂಲಕವೂ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಕೇಂದ್ರ ಸರ್ಕಾರ ರೈತಪರ ಸುರ್ಗಿವಾಜ್ಞೆಯನ್ನು ರಾಜ್ಯ ಸರ್ಕಾರ ಹಾಗೂ ಬಿಜೆಪಿ ಸ್ವಾಗತಿಸುತ್ತಿದೆ ಎಂದರು.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಎಪಿಎಂಸಿ ಕಾಯ್ದೆಗೆ ಯಾವ ರೈತರು ವಿರೋಧ ಮಾಡ್ತಿಲ್ಲ. ರೈತರೇ ಈ ಕಾಯ್ದೆಯನ್ನು ಸ್ವಾಗತ ಮಾಡಿದ್ದಾರೆ. ಪ್ರತಿಪಕ್ಷಗಳು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದ್ರೂ ಮಾರಬಹುದು. ಈ ಕಾಯ್ದೆಯಿಂದ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಎಪಿಎಂಸಿಗೆ ಬೇಕಾದ್ರೂ ಹೋಗಿ ಮಾರಾಟ ಮಾಡಲಿ. ಕಂಪನಿಗಳಿಗೆ ಬೇಕಾದ್ರೂ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ರೈತರಿಗೆ ಅನ್ಯಾಯ ಆಗಿಲ್ಲ, ರೈತರಿಗೆ ಅನುಕೂಲವಾಗಲಿದೆ ಎಂದರು.
ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಎಪಿಎಂಸಿಯಿಂದಾಗಿ ರೈತರು ಗುಣಮಟ್ಟದ ಬೆಳೆ ಬೆಳೆಯುತ್ತಾರೆ. ನೇರ ಕೃಷಿ ಮಾಡುವವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡುವ ಉದ್ದೇಶವಿದೆ. ಇದರಿಂದ ರೈತರಿಗೆ ನಷ್ಟವಿಲ್ಲ, ಹೆಚ್ಚು ಲಾಭ ಇದೆ. ಇದರಿಂದ ದಲ್ಲಾಳಿಗಳಿಗೆ ಲಾಸ್ ಆಗಿದೆ. ಹೀಗಾಗಿ, ರೈತರ ಮೂಲಕ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.