ಬೆಂಗಳೂರು: ರಾಜ್ಯದಲ್ಲಿ 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಹಿರಿಯ ಅಧಿಕಾರಿಗಳು ಖುದ್ದು ನಿಗಾ ವಹಿಸಬೇಕು ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೃಷಿ ಇಲಾಖೆಯ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ, ರಾಜ್ಯದಲ್ಲಿ ಮೇ 31ರ ಮಾಹಿತಿಯಂತೆ 1.26 ಲಕ್ಷ ಮೆಟ್ರಿಕ್ ಟನ್ ಡಿಎಪಿ ಲಭ್ಯವಿದ್ದು, ಒಟ್ಟಾರೆ, 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ರಾಜ್ಯದ ಬೇಡಿಕೆ ಪೂರೈಸಲು ಯಾವುದೇ ಕೊರತೆ ಇಲ್ಲ. ಆದರೆ, ವ್ಯವಸ್ಥಿತವಾಗಿ ಅಗತ್ಯ ಆಧರಿಸಿ, ರಸಗೊಬ್ಬರ ಸಕಾಲದಲ್ಲಿ ಪೂರೈಸಲು ಹಿರಿಯ ಅಧಿಕಾರಿಗಳೇ ಮೇಲ್ವಿಚಾರಣೆ ನಡೆಸಿ, ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ನಕಲಿ ಬೀಜ ಪೂರೈಕೆ ವಿರುದ್ಧ ಕಠಿಣ ಕ್ರಮ: ಅಂತೆಯೇ ಬಿತ್ತನೆ ಬೀಜ ರಾಜ್ಯದಲ್ಲಿ 7.81 ಲಕ್ಷ ಕ್ವಿಂಟಾಲ್ನಷ್ಟು ಲಭ್ಯವಿದ್ದು, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಿದೆ. ಆದರೆ, ನಕಲಿ ಬೀಜಗಳ ಹಾವಳಿಯನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಈ ಕುರಿತು ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕು. ನಕಲಿ ಬೀಜ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 114.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರೊಂದಿಗೆ ಕಂದಾಯ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳಿಂದ, ಬಂಜರು ಭೂಮಿ ಹಾಗೂ ಸವಳು - ಜವಳು ಭೂಮಿಯ ಮಾಹಿತಿ ಪಡೆದು, ಈ ವರ್ಷ ಕನಿಷ್ಠ ತಲಾ ಒಂದು ಲಕ್ಷ ಹೆಕ್ಟೇರ್ನಷ್ಟು ಬಂಜರು ಭೂಮಿ ಹಾಗೂ ಸವಳು - ಜವಳು ಭೂಮಿಯನ್ನು ಕೃಷಿಯೋಗ್ಯವಾಗಿ ಪರಿವರ್ತಿಸುವಂತೆ ಸೂಚಿಸಿದರು.
ಸೆಕೆಂಡರಿ ಕೃಷಿ ನಿರ್ದೇಶನಾಲಯವು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಂಎಸ್‍ಎಂಇಗಳು, ಅಗ್ರಿಗೇಟರುಗಳು, ಸ್ವಸಹಾಯ ಸಂಘಗಳು, ಆಂಕರ್ ಬ್ಯಾಂಕಿಂಗ್ ಜೊತೆಗೆ ನಿಕಟ ಸಂಪರ್ಕ ಬೆಳೆಸಿ ಕಾರ್ಯ ನಿರ್ವಹಿಸಬೇಕು. ರೈತರಿಂದ ಕೃಷಿ ಉತ್ಪನ್ನ ಖರೀದಿಸುವಂತೆ ಹಲವು ಅಗ್ರಿಗೇಟರ್ಗಳಿಗೆ ವಿವಿಧ ಸಂದರ್ಭಗಳಲ್ಲಿ ಸಲಹೆ ನೀಡಿದ್ದೇನೆ. ಈ ಕುರಿತು ಸಮನ್ವಯ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು.
ರಾಜ್ಯದಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಉತ್ಪಾದಕತೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಯ ಮಟ್ಟಕ್ಕೆ ಹೆಚ್ಚಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದರು. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಹಂಚಿಕೆ ಮಾಡುವಾಗ ರೈತ ಉತ್ಪಾದಕ ಸಂಘಗಳಿಗೆ ಆದ್ಯತೆ ನೀಡಲು ನಿರ್ದೇಶನ ನೀಡಿದರು.
ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ: ಕೃಷಿ ಸಿಂಚಾಯಿ ಯೋಜನೆಯಡಿ 57 ತಾಲೂಕುಗಳ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ರಾಜ್ಯದ ಪಾಲಿನ ಅನುದಾನ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ, ಜಲಾನಯನ ಅಭಿವೃದ್ಧಿ ಕೆಲಸಗಳಿಗೇ ಹೆಚ್ಚಿನ ಒತ್ತು ನೀಡಬೇಕು ಹಾಗೂ ಹಿಂದಿನ ಯೋಜನೆಗಳ ಪರಿಣಾಮದ ಅಧ್ಯಯನ ವರದಿ ಸಲ್ಲಿಸುವಂತೆ ಸಿಎಂ ತಿಳಿಸಿದರು.
ಕೃಷಿ ಯಾಂತ್ರೀಕರಣ ಉತ್ತೇಜನಕ್ಕಾಗಿ ಪ್ರತಿ ಎಕರೆಗೆ 250 ರೂ. ನಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಯನ್ನು ಈ ಮಾಸಾಂತ್ಯದೊಳಗೆ ಜಾರಿಗೊಳಿಸಲು ಸೂಚಿಸಿದರು.
ಇದನ್ನೂ ಓದಿ: ರಾಜ್ಯದ 47.86 ಲಕ್ಷ ರೈತರಿಗೆ ಸಿಎಂ ಕಿಸಾನ್ ಯೋಜನೆ 956.71 ಕೋಟಿ ಬಿಡುಗಡೆ