ಬೆಂಗಳೂರು: ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ವಸ್ತುಸ್ಥಿತಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಖರೀದಿ ನೀತಿ ರೂಪಿಸಲು ಶಿಫಾರಸುಗಳು ಮತ್ತು ಸಿರಿಧಾನ್ಯಗಳ ವಿಸ್ತೀರ್ಣ, ಉತ್ಪಾದನೆ, ಉತ್ಪಾದಕತೆ ಮತ್ತು ಆರ್ಥಿಕದಾಯಕತೆ ವಿಶ್ಲೇಷಣಾ ವರದಿ ಹಾಗೂ ಶಿಫಾರಸುಗಳು ಎಂಬ ಎರಡು ವರದಿಗಳನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಸಿಎಂಗೆ ಸಲ್ಲಿಸಿದರು.
ಕೃಷಿ ಬೆಲೆ ಆಯೋಗ ನೀಡಿದ ವರದಿಯಲ್ಲಿ ಕೆಲ ಪ್ರಮುಖ ಶಿಫಾರಸುಗಳನ್ನು ಸರ್ಕಾರ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ವಾರ್ಷಿಕ 55 ಲಕ್ಷ ಟನ್ ಭತ್ತ, 13 ಲಕ್ಷ ಟನ್ ರಾಗಿ, 10 ಲಕ್ಷ ಟನ್ ಜೋಳವನ್ನು ಉತ್ಪಾದಿಸಲಾಗುತ್ತಿದೆ.
ಕೇಂದ್ರದ ಆಹಾರ ಭದ್ರತೆ ಕಾಯ್ದೆಯಡಿ ವಿವಿಧ ಪಡಿತರ ವ್ಯವಸ್ಥೆಯಡಿ ಒಟ್ಟು 5.10 ಫಲಾನುಭವಿಗಳಿಗೆ ವಾರ್ಷಿಕ ಸುಮಾರು 30.38 ಲಕ್ಷ ಟನ್ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪಡಿತರ ವ್ಯವಸ್ಥೆಗೆ ವಿತರಿಸಲು ಅವಶ್ಯಕವಿರುವ ಪ್ರಮಾಣದ ಆಹಾರ ಧಾನ್ಯಗಳನ್ನು ರಾಜ್ಯದ ರೈತರಿಂದಲೇ ಖರೀದಿಸುವ ನಿಟ್ಟಿನಲ್ಲಿ ಸಮಗ್ರ ಖರೀದಿ ನೀತಿ ರೂಪಿಸುವಂತೆ ಶಿಫಾರಸು ಮಾಡಿದೆ.
ಆಹಾರ ಭದ್ರತೆ ಕಾಯ್ದೆಯಡಿ ರಾಜ್ಯದಲ್ಲಿ ಉತ್ಪಾದಿಸಲಾಗುತ್ತಿರುವ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದರಿಂದ ರೈತರಿಗೆ ಖಾತ್ರಿ ಬೆಲೆ ಮತ್ತು ಸುಸ್ಥಿರ ಆದಾಯ ಹೆಚ್ಚಲಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕೊಯ್ಲು ಅವಧಿಯಲ್ಲಿ ಬೆಂಬಲ ಬೆಲೆಯಡಿ ಖರೀದಿಗಾಗಿ 5 ಕಿ.ಮೀ ಅಂತರದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದು, ವಿವಿಧ ಎಪಿಎಂಸಿ ಬಳಸಿಕೊಂಡು ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು, ಪ್ರತಿ ರೈತರಿಗೆ ವಿಧಿಸುವ ಗರಿಷ್ಠ ಪ್ರಮಾಣ ಮಿತಿಯನ್ನು ಸಡಿಲಗೊಳಿಸುವುದು, ಆವರ್ತ ನಿಧಿ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಮುಂತಾದ ಅಂಶಗಳನ್ನು ಸಮಗ್ರ ಖರೀದಿ ನೀತಿಯಲ್ಲಿ ಅಳವಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ.
ರಾಜ್ಯದಲ್ಲಿ ಸಿರಿ ಧಾನ್ಯಗಳ ಬೆಳೆ ವಿಸ್ತೀರ್ಣ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಬೆಳೆ ಹಾಗೂ ಬೆಳೆ ಪ್ರೋತ್ಸಾಹ ನೀಡುವುದು ಅತ್ಯವಶ್ಯಕವಾಗಿದೆ. ಕೇಂದ್ರ ಸರ್ಕಾರವು ಸಿರಿ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತಿಲ್ಲವಾದ್ದರಿಂದ ರಾಜ್ಯ ಸರ್ಕಾರವು ಕೃಷಿ ಬೆಲೆ ಆಯೋಗದ ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಕ್ವಿಂಟಾಲ್ ಗೆ ರೂ. 4500-5000 ರೂ. ಬೆಂಬಲ ಬೆಲೆ ಘೋಷಿಸುವಂತೆ ಶಿಫಾರಸು ಮಾಡಿದೆ.
ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ರೈತರಿಂದ ನೇರವಾಗಿ ಖರೀದಿಸಿ, ಶಾಲಾ ಮಕ್ಕಳಿಗೆ ಬಿಸಿಯೂಟ, ಗರ್ಭಿಣಿ, ಬಾಣಂತಿಯರಿಗೆ ಸಿರಿಧಾನ್ಯ ಆಹಾರ ಕಿಟ್ ವಿತರಿಸುವ ಮೂಲಕ ಆಹಾರ ಭದ್ರತೆಯ ಜೊತೆಗೆ ಪೌಷ್ಟಿಕ ಭದ್ರತೆ ಒದಗಿಸಬೇಕನ್ನುವುದು ಆಯೋಗದ ವರದಿಯ ಪ್ರಮುಖ ಅಂಶವಾಗಿದೆ.