ಬೆಂಗಳೂರು: ಅಗ್ರಿ ಗೋಲ್ಡ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ಥಿರ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿ ಹೂಡಿಕೆದಾರರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪೂರ್ಣಾವಧಿ ಸಕ್ಷಮ ಪ್ರಾಧಿಕಾರಿ ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ್ ಕಲ್ಯಾಣ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲ ವಿ. ಶ್ರೀನಿಧಿಯವರು ಸಕ್ಷಮ ಪ್ರಾಧಿಕಾರಿಯ ಕಾರ್ಯಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಈ ಕಂಪೆನಿಯಲ್ಲಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿದ್ದು, ಸಮಾರು 1,700 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಈ ಪೈಕಿ 8.62 ಲಕ್ಷ ಹೂಡಿಕೆದಾರರ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ. ಹಾಲಿ ಸಕ್ಷಮ ಪ್ರಾಧಿಕಾರಿಯು ರಾಮನಗರ ಉಪವಿಭಾಗಾಧಿಕಾರಿ ಆಗಿದ್ದಾರೆ. ಅವರು ಎರಡೂ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿರ್ವಹಿಸಬೇಕಾಗಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದೊಂದು ದೊಡ್ಡ ವಂಚನೆಯ ಪ್ರಕರಣ. ಲಕ್ಷಾಂತರ ಅರ್ಜಿಗಳು ವಿಲೇವಾರಿ ಮಾಡಬೇಕಿರುವಾಗ ಈ ಪ್ರಕರಣಕ್ಕೆ ಸಿಮೀತವಾಗಿ ಪೂರ್ಣಾವಧಿ ಸಕ್ಷಮ ಪ್ರಾಧಿಕಾರಿಯನ್ನು ನೇಮಕ ಮಾಡಬೇಕು. ಅವರಿಗೆ ಬೇರೆ ಯಾವುದೇ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಬಾರದು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ ಪೀಠ ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿತು.