ಬೆಂಗಳೂರು: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಹಾಲಿ ನೇಮಕಾತಿಗಳಿಗೆ ವಿಧಿಸಿರುವ ನಿರ್ಬಂಧ ತೆರವಾದ ಕೂಡಲೇ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಬಸವರಾಜ ಪಾಟೀಲ್ ಇಟಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 81 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು 440 ಹುದ್ದೆಗಳು ಭರ್ತಿ ಆಗಿವೆ. ಆದರೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಆಗಿಲ್ಲ ಎಂದರು.
ಪ್ರತಿ ಶೈಕ್ಷಣಿಕ ವರ್ಷ ಸಂಭವಿಸುವ ಶಿಕ್ಷಕರ ಕೊರತೆಯನ್ನು ಅತಿಥಿ ಶಿಕ್ಷಕರನ್ನು ನೇಮಿಸುವ ಮೂಲಕ ಬೋಧನಾ ಚಟುವಟಿಕೆ ಕುಂಠಿತ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 1,104 ಹಾಗೂ ಪ್ರೌಢ ಶಾಲೆಗಳಲ್ಲಿ 145 ಅತಿಥಿ ಶಿಕ್ಷಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,591 ಹಾಗೂ ಪ್ರೌಢ ಶಾಲೆಗಳಲ್ಲಿ 199 ಅತಿಥಿ ಶಿಕ್ಷಕರನ್ನು ಹೊರಗುತ್ತಿಗೆ ಮೂಲಕ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಯಚೂರು ಜಿಲ್ಲೆಯಲ್ಲಿ 2,137 ಪ್ರಾಥಮಿಕ, 542 ಪ್ರೌಢಶಾಲೆ ಶಿಕ್ಷಕರ ಹುದ್ದೆ, ಕೊಪ್ಪಳ ಜಿಲ್ಲೆಯಲ್ಲಿ 1,701 ಪ್ರಾಥಮಿಕ ಹಾಗೂ 128 ಪ್ರೌಢ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಎರಡೂ ಜಿಲ್ಲಾ ವ್ಯಾಪ್ತಿಯ ಒಟ್ಟು 3,838 ಪ್ರಾಥಮಿಕ ಹಾಗೂ 670 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳನ್ನು ಕೋವಿಡ್-19ನಿಂದ ಉಂಟಾದ ಆರ್ಥಿಕ ಸಂಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ನೇಮಕಾತಿಗಳಿಗೆ ವಿಧಿಸಿರುವ ನಿರ್ಬಂಧ ತೆರವಾದ ಕೊಡಲೇ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸದನಕ್ಕೆ ಸುರೇಶ್ ಕುಮಾರ್ ತಿಳಿಸಿದರು.