ಬೆಂಗಳೂರು: ತಮ್ಮ ಮನೆ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಅನರ್ಹ ಶಾಸಕ ಬೈರತಿ ಬಸವರಾಜು ಶಕ್ತಿ ಪ್ರದರ್ಶನ ನಡೆಸಿದರು. ಕೇವಲ ವಾಟ್ಸಪ್ ಮೂಲಕ ಕಳಿಸಿದ್ದ ಮೆಸೇಜ್ ನೋಡಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಪಾಲಿಕೆ ಸದಸ್ಯರು ಆಗಮಿಸಿ ಬಸವರಾಜು ಅವರಿಗೆ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು, ಒಂದು ಸಣ್ಣ ಸಂದೇಶವನ್ನು ಕಾರ್ಯಕರ್ತರಿಗೆ ಕಳುಹಿಸಿದ್ದೆ, ಅದನ್ನು ನೋಡಿ ಇಂದು ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ನಮ್ಮ ಕಾರ್ಯಕರ್ತರ ಮಾತು ಕೇಳಿ ಸಂತೋಷವಾಗಿದೆ ಎಂದರು.
ಕೆಲ ಹಿರಿಯ ನಾಯಕರ ಮಾತು ಕೇಳಿ ಈ ಪರಿಸ್ಥಿತಿಗೆ ಬಂದಿದ್ದೇವೆ. ಈ ಬಗ್ಗೆ ಆದಷ್ಟು ಬೇಗ ಅನರ್ಹಗೊಂಡ ಎಲ್ಲಾ 16 ಶಾಸಕರೂ ಸೇರಿ ಸುದ್ದಿಗೋಷ್ಠಿ ನಡೆಸಿ, ನಾಯಕರ ಬಂಡವಾಳ ಬಯಲು ಮಾಡುತ್ತೇವೆ. ಅನರ್ಹತೆ ಕುರಿತಾದ ದಾಖಲೆಗಳು ದೊರೆತ ಕೂಡಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ. ಇಡೀ ಕ್ಷೇತ್ರ ನನ್ನೊಂದಿಗಿದೆ. ಇದು ನನಗೆ ಇನ್ನಷ್ಟು ಬಲ ತಂದಿದೆ. ಸಾರ್ವಜನಿಕರ ಸೇವೆಗಾಗಿ ಅವರೊಂದಿಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.