ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆರೋಪಿ ಆಫ್ರಿಕಾ ಪ್ರಜೆ ಸಾವು ಪ್ರಕರಣ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ತನಿಖೆ ಆದೇಶ ಬೆನ್ನಲೇ ಜೆ.ಸಿ.ನಗರ ಪೊಲೀಸ್ ಠಾಣೆಗೆ ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದೆ. ಇಂದು ಮಧ್ಯಾಹ್ನ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಧಕ್ಕೆ ಹಿನ್ನೆಲೆಯಲ್ಲಿ ಐವರು ವಿದೇಶಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಅಧಿಕಾರಿಗಳ ಭೇಟಿ:
ಘಟನೆ ತೀವ್ರತೆ ಪಡೆಯುತ್ತಿದ್ದಂತೆ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಪರಿಸ್ಥಿತಿ ಸಂಪೂರ್ಣ ಪೊಲೀಸ್ ನಿಯಂತ್ರಣಕ್ಕೆ ಬಂದಿದೆ.
ಮುಂದಿನ ತನಿಖೆ ಹಾದಿ ಹೇಗಿರಲಿದೆ?‘
ಸಿಐಡಿ ಅಧಿಕಾರಿಗಳಿಂದ ವಿದೇಶಿ ಪ್ರಜೆ ಜಾನ್ ಸಾವಿಗೆ ಸಂಬಂಧಪಟ್ಟ ಕೇಸ್ ತನಿಖೆ ನಡೆಯಲಿದ್ದು, ಎಸ್ಪಿ ವೆಂಕಟೇಶ್ ಹಾಗು ಡಿಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಠಾಣೆ ಮುಂದೆ ಅಸಭ್ಯ ವರ್ತನೆ ಮತ್ತು ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮತ್ತು ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿ ಸಂಬಂಧ ಒಂದಕ್ಕಿಂತ ಹೆಚ್ಚು ಕೇಸ್ ದಾಖಲು ಮಾಡಿಕೊಳ್ಳುವ ಸಾಧ್ಯತೆಯಿದೆ. ಹೊಸದಾಗಿ ದಾಖಲಾಗಿರುವ ಪ್ರಕರಣ ಸಂಬಂಧ ಇನ್ಮೂ ಹಲವು ಆಫ್ರಿಕಾ ಪ್ರಜೆಗಳನ್ನು ಬಂಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ:
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದರೆ, ಪೂರ್ವ ವಿಭಾಗದ ಪೊಲೀಸ್ ತಂಡದಿಂದ ಠಾಣೆ ಬಳಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಆಫ್ರಿಕಾ ಪ್ರಜೆಗಳು ಹೆಚ್ಚಿನದಾಗಿ ನಗರದ ಬಾಣಸವಾಡಿ, ಹೆಣ್ಣೂರು ಹಾಗು ರಾಮಮೂರ್ತಿ ನಗರ, ಕೆ ಆರ್ ಪುರ ಭಾಗಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದು, ಗಸ್ತು ಹೆಚ್ಚಿಸಲಾಗಿದೆ.