ಬೆಂಗಳೂರು : ದೇಶದ ಸುಪ್ರಸಿದ್ಧ ವೈಮಾನಿಕ ವಿಜ್ಞಾನಿ, ಪದ್ಮವಿಭೂಷಣ ಪ್ರೋ.ರೊದ್ದಂ ನರಸಿಂಹ(87) ಅವರು ನಿಧನರಾಗಿದ್ದಾರೆ.
ಮೆದುಳು ರಕ್ತಸ್ತಾವ ಹಾಗೂ ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಕಳೆದ ಕೆಲ ವಾರಗಳಿಂದ ಅವರು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಗರದ ಪ್ರತಿಷ್ಠಿತ ಐಐಎಸ್ಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ರೊದ್ದಂ ಅವರು ಎನ್ ಎ ಎಲ್ ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಭಾರತದಲ್ಲಿನ ವೈಮಾನಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ವೈಮಾನಿಕ ಕ್ಷೇತ್ರಕ್ಕೆ ರೊದ್ದಂ ಅವರು ನೀಡಿದ ಅಪೂರ್ವ ಕೊಡುಗೆಗಾಗಿ 2013 ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಭಾರತ ಸರ್ಕಾರದ ವೈಮಾನಿಕ ಕ್ಷೇತ್ರದ ನೀತಿ ನಿರೂಪಣೆಯಲ್ಲಿ ರೊದ್ದಂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಭಾರತೀಯ ವೈಮಾನಿಕ ವಿಜ್ಞಾನಿಯಾಗಿದ್ದ ಅವರು ಬೆಂಗಳೂರು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ ಸಿ) ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನ್ಯಾಷನಲ್ ಏರೋ ಸ್ಪೇಸ್ ಲ್ಯಾಬೋರೇಟರಿ (ಎನ್ಎಎಲ್ ) ನಿರ್ದೇಶಕರಾಗಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಡ್ವಾನ್ಸಡ್ ಸ್ಟಡೀಸ್ ನಿಯಾಸ್ ನಿರ್ದೇಶಕರಾಗಿ, ಬೆಂಗಳೂರಿನ ಜವಾಹರಲಾಲ್ ನೆಹರು ಕೇಂದ್ರದ ಮೆಕ್ಯಾನಿಕ್ ಘಟಕದ ಅಧ್ಯಕ್ಷರಾಗಿದ್ದರು. 1961 ಅಮೆರಿಕದ ಕ್ಯಾಲಿಪೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಹೆಚ್ ಡಿ,1982 ರಲ್ಲಿ ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ಸೈನ್ಸಸ್ ಕೆಂದ್ರ ಸ್ಥಾಪಿಸಿ 1989 ಮುಖ್ಯಸ್ಥರಾಗಿದ್ದರು. 1984 ರಿಂದ 1993 ರವರೆಗೆ ಎನ್ ಎ ಎಲ್ ನಿರ್ದೇಶಕರಾಗಿ ಏರೋಸ್ಪೇಸ್ ಪ್ಲೂಯೆಡ್ ಡೈನಾಮಿಕ್ಸ್ ನಲ್ಲಿ ಸೇವೆ ಸಲ್ಲಿಸಿದ್ದರು.
ಓದಿ :ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ವಿಧಿವಶ
1953 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ (ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಬಿಐ ಪದವಿ ಪಡೆದು, 1955 ರಲ್ಲಿ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ(ಐಐಎಸ್ಸಿ) ಎಂ ಇ ಪದವಿ ಪಡೆದರು. 1962 ರಲ್ಲಿ ಐಎಸ್ ಎಸ್ಸಿಯಲ್ಲಿ ಸೇವೆ ಆರಂಭಿಸಿ 1999 ರವರೆಗೆ ಐಐಎಸ್ಸಿಯ ಏರೋನಾಟಿಕಲ್ ಸೈನ್ಸ್ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಇಂದು ಅವರ ಹೆಬ್ಬಾಳದ ನಿವಾಸದ ಬಳಿ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಸದ್ಯ ನರಸಿಂಹ ಅವರ ಪಾರ್ಥಿವ ಶರೀರವನ್ನು ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಹೆಬ್ಬಾಳ ಬಳಿಯ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರೆವೇರಲಿದೆ ಎಂದು ರೊದ್ದಂ ಅವರ ಆಪ್ತ ಸ್ನೇಹಿತ ಚಂದ್ರಶೇಖರ್ ಅವರು ತಿಳಿಸಿದ್ದಾರೆ.