ಬೆಂಗಳೂರು: ಏರ್ ಶೋ ಆಧುನಿಕ ತಂತ್ರಜ್ಞಾನದ 13ನೇ ಆವೃತ್ತಿಯ ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕೆ ಇರಲಿದ್ದು, ಇದು ಆತ್ಮ ನಿರ್ಭರ ಭಾರತ ಯೋಜನೆಗೆ ಪುಷ್ಠಿ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಏರೋ ಇಂಡಿಯಾ 2021ರ ಮುನ್ನ ನಡೆಸಿದ ಸಂವಾದದಲ್ಲಿ ರಾಜನಾಥ್ ಸಿಂಗ್, ಸಿಎಂ ಯಡಿಯೂರಪ್ಪಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಾರಣ ಅವರ ಆಸಕ್ತಿ ಹಾಗೂ ಪಾಲುದಾರಿಕೆ ಮಹತ್ವದ್ದಾಗಿದೆ ಎಂದರು.
ಜಗತ್ತನ್ನು ಕೋವಿಡ್ ಮಹಾಮಾರಿ ಕಾಡುತ್ತಿದೆ. ಇದರ ನಡುವೆಯೂ ಇಂತಹ ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆಯಾದ ಆತ್ಮ ನಿರ್ಭರ ಭಾರತದಿಂದ ಮಾತ್ರ ಸಾಧ್ಯವಾಗಿರುವುದು ಎಂದು ಶ್ಲಾಘಿಸಿದರು. ಕರ್ನಾಟಕ ರಾಜ್ಯ ಸಾಫ್ಟ್‌ವೇರ್ ವಲಯದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ನಡೆದ ಆವಿಷ್ಕಾರಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಏರೋ ಇಂಡಿಯಾ ಕೇವಲ ಪ್ರಾರಂಭವಷ್ಟೇ, ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಲಿದೆ ಎಂದು ರಾಜ್‌ನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ನಮ್ಮ ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲೆ ಅವಲಂಬನೆ ಆಗಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್
ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಈ ಬಾರಿ ಬೆಂಗಳೂರು ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಮರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಸರ್ಕಾರದ ಪರವಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ ಎಂದರು.
ಮುಖ್ಯ ಆಕರ್ಷಣೆ:
ಐಒಆರ್: ಹಿಂದು ಮಹಾಸಾಗರ ರಾಷ್ಟ್ರಗಳ ರಕ್ಷಣಾ ಸಚಿವರ ಸಮ್ಮೇಳನ ನಡೆಯಲಿದ್ದು, 28 ರಾಷ್ಟ್ರಗಳ ರಕ್ಷಣಾ ಸಚಿವರು ಹಾಗೂ ವಾಯುಪಡೆ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ನಿರೀಕ್ಷೆಗಳ ಪ್ರಕಾರ 3 ದಿನಗಳ ಏರೋ ಶೋನಲ್ಲಿ 200ಕ್ಕೂ ಹೆಚ್ಚು ದ್ವೀಪಕ್ಷೀಯ ಒಪ್ಪಂದಗಳಿಗೆ ಭಾರತ ಸಹಿ ಹಾಕಲಿದೆ. ಜೊತೆಗೆ ಸ್ಟಾರ್ಟ್ ಅಪ್ ಮಂಥನ ಕೂಡ ಈ ಬಾರಿ ನಡೆಯಲಿದ್ದು, ಆಧುನಿಕ ಆವಿಷ್ಕಾರಗಳನ್ನು ಯುವಕರು ಪ್ರದರ್ಶನ ಮಾಡಲಿದ್ದಾರೆ.
ನಾಳೆ ಬೆಳಗ್ಗೆ 9ಕ್ಕೆ ಏರೋ ಇಂಡಿಯಾ 2021ಕ್ಕೆ ಚಾಲನೆ ದೊರಕಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಪಡೆ ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ. ಕೊನೆ ದಿನವಾದ ಫೆ. 5ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಭೇಟಿ ನೀಡಿ ಭಾಷಣ ಮಾಡಲಿದ್ದಾರೆ.