ಬೆಂಗಳೂರು: ಟ್ರೆಂಡ್ ತಕ್ಕಂತೆ ಸೈಬರ್ ಖದೀಮರು ತಮ್ಮ ವಂಚನೆ ಮಾದರಿ ಬದಲಾಯಿಸುತ್ತಿದ್ದು, ದಿನೇ ದಿನೆ ಹೊಸ ಹೊಸ ಶೈಲಿಯಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಹಿಳೆಗೆ ಅರಿವಿಲ್ಲದಂತೆ ಆಕೆಯ ಬೆರಳಚ್ಚು ಬಳಸಿ ಬ್ಯಾಂಕ್ ಖಾತೆಯಿಂದ ವಂಚಕರು 20 ಸಾವಿರ ರೂಪಾಯಿ ಹಣ ಎಗರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ರಾಜ್ಯದಲ್ಲಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯ (ಎಇಪಿಎಸ್ ) ವಂಚನೆಯಾದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತನಗರದಲ್ಲಿ ವಾಸವಿರುವ ಸುನಿತಾ ರವಿಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮನೆಗೆಲಸ ಮಾಡುವ ಸುನಿತಾ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಯೂನಿಯನ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಸುನಿತಾ ಅವರಿಗೆ ಸೆಪ್ಟೆಂಬರ್ 6 ರಂದು 10 ಸಾವಿರ ಹಾಗೂ ಸೆ.7ರಂದು 10 ಸಾವಿರ ಹಣ ಕಡಿತವಾಗಿರುವ ಬಗ್ಗೆ ಗೆ ಎರಡು ಬಾರಿ ಮೆಸೇಜ್ ಬಂದಿದೆ. ಇದನ್ನ ಕಂಡು ಸುನಿತಾ ಆಶ್ವರ್ಯಕ್ಕೊಳಗಾಗಿದ್ದರು. ಹಣ ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್‌ಗೆ ಯಾವುದೇ ಚೆಕ್ ನೀಡಿರಲಿಲ್ಲ. ಅಲ್ಲದೇ ಮೊಬೈಲ್ ಗೆ ಓಟಿಪಿ ಸಹ ಬಂದಿರಲಿಲ್ಲ. ಕೂಡಲೇ ಬ್ಯಾಂಕ್ ಗೆ ಹೋಗಿ ವಿಚಾರಣೆ ನಡೆಸಿದ ಮಹಿಳೆಗೆ ಗೊತ್ತಾಗಿದ್ದೇ ಎಇಪಿಎಸ್ ವಂಚನೆ.
ಏನಿದು Aeps ವಂಚನೆ ?: ಸರಳವಾಗಿ ಹೇಳುವುದಾದರೆ ಬ್ಯಾಂಕ್ ಖಾತೆ ಆಧಾರ್ ಖಾತೆ ವಿಲೀನಗೊಳಿಸಿ ಬಯೋಮೆಟ್ರಿಕ್ ಬಳಸಿ ಹಣ ರವಾನೆ ಅಥವಾ ವಿತ್ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಯೇ AEPS. ಆಧಾರ್ ಕಾರ್ಡ್ ದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣಗೊಳಿಸಿದ ಬಳಿಕ ಹಣದ ವಹಿವಾಟು ನಡೆಸಬಹುದಾಗಿದೆ. ಸೈಬರ್ ಚೋರರು ಮಹಿಳೆಯ ಬಯೋಮೆಟ್ರಿಕ್ ಬಳಸಿಕೊಂಡು ಹಣ ವಂಚಿಸಿದ್ದಾರೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರುದಾರೆ ಸುನಿತಾ ಇತ್ತೀಚೆಗೆ ಬಯೋಮೆಟ್ರಿಕ್ ಮೂಲಕ ಬೆರಳಚ್ಚು ನೀಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬ್ಯಾಂಕ್ ಗೆ ಹೋಗಿ ಪರಿಶೀಲನೆ ನಡೆಸಿರುವ ಪೊಲೀಸರು ಮಹಿಳೆಗೆ ಅರಿವಿಲ್ಲದೆಂತೆ ಆಕೆಯ ಫಿಂಗರ್ ಪ್ರಿಂಟ್ ಮಾದರಿ ಬಳಸಿಯೇ ಖದೀಮರು ಹಣ ಎಗರಿಸಿರುವುದು ಸಾಬೀತುಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ ದಾವಣಗೆರೆಯಲ್ಲಿರುವ ಆಸ್ತಿ ಮಾರಾಟ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳು ಬಯೋಮೆಟ್ರಿಕ್ ಪಡೆದುಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರಿಗೆ ನೊಟೀಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಸಾರ್ವಜನಿಕರು ಮಾಡಬೇಕಿರೋದು ಏನು?: ಎಇಪಿಎಸ್ ವ್ಯವಸ್ಥೆ ಮೂಲಕ ಹಣ ರವಾನೆ ಆಥವಾ ವಿತ್ ಡ್ರಾ ಮಾಡುವ ಬ್ಯಾಂಕ್ ಖಾತೆದಾರರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಇನ್ನಿತರ ಮಹತ್ವರ ಮಾಹಿತಿಗಳನ್ನ ಹಂಚಿಕೊಳ್ಳಬೇಡಿ. ಬಯೋಮೆಟ್ರಿಕ್ ಮೂಲಕ ನಿಮ್ಮ ಬೆರಳಚ್ಚು ಪ್ರತಿಯನ್ನ ಸಂಗ್ರಹಿಸುವ ಸೈಬರ್ ಚೋರರು ಸರ್ಕಾರಿ ವೆಬ್ ಸೈಟ್ ಗಳ ಮೂಲಕ ನಿಮ್ಮ ವೈಯಕಿಕ್ತ ಡೇಟಾ ಕದ್ದು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ. ಪಿನ್ ನಂಬರ್ ಅಥವಾ ಪಾಸ್ ವರ್ಡ್ ಗಳನ್ನ ಹಂಚಿಕೊಳ್ಳಬೇಡಿ. ಅನಗತ್ಯ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ. ನಿಮ್ಮ ಮೊಬೈಲ್ ಆಥವಾ ಕಂಪ್ಯೂಟರ್ ಗೆ ಕಾಲಕ್ಕೆ ಅನುಗುಣವಾಗಿ ಆ್ಯಂಟಿವೈರಸ್ ಸಾಫ್ಟ್ ವೇರ್ ಗಳನ್ನ ಅಪ್ ಡೇಟ್ ಮಾಡಿಕೊಳ್ಳಿ.
ಇದನ್ನೂ ಓದಿ: ಭಾವಚಿತ್ರ, ಧ್ವನಿ ನಕಲಿಸಿ ಸೈಬರ್ ವಂಚನೆ; ಕಾಲ್ ರಿಸೀವ್‌ಗೂ ಮುನ್ನ ಹುಷಾರ್!