ಬೆಂಗಳೂರು: ಸಿಡಿ ಪ್ರಕರಣದಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಸುಳ್ಳು ದೂರು ನೀಡಿರುವ ಯುವತಿ ಎಸ್ಐಟಿ ಮೇಲೆ ಅನಗತ್ಯ ಒತ್ತಡ ಸೃಷ್ಟಿಸಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಆರೋಪಿಸಿದ್ದಾರೆ.
ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಯುವತಿ ಇದೀಗ ಪಾರಾಗಲು ತನಿಖಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಆರೋಪಿಯನ್ನು 3 ಗಂಟೆಗಳ ವಿಚಾರಣೆಗೊಳಪಡಿಸಿ ನನ್ನನ್ನು ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದಿರುವ ಯುವತಿ, ತಾನು ಎಸಗಿರುವ ಸಂಘಟಿತ ಅಪರಾಧದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
'ರಮೇಶ್ ಜಾರಕಿಹೊಳಿಯವರೇ ನಿಜವಾದ ಸಂತ್ರಸ್ತರು'
ಸಮಾಜದಲ್ಲಿ ಘನತೆಯಿರುವ ವ್ಯಕ್ತಿಯಿಂದ ಸುಲಿಗೆಗೆ ಯತ್ನಿಸಿ ತೇಜೋವಧೆ ಮಾಡಿರುವ ತಂಡವು ಇದೀಗ ತನಿಖೆ ದಾರಿ ತಪ್ಪಿಸಲು ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಕಕ್ಷಿದಾರರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯವರೇ ನಿಜವಾದ ಸಂತ್ರಸ್ತರು. ಸಂಘಟಿತ ಅಪರಾಧ ಹಾಗೂ ನಕಲಿ ದೃಶ್ಯಾವಳಿ ಇಟ್ಟುಕೊಂಡು ನನ್ನ ಕಕ್ಷಿದಾರರ ಘನತೆಗೆ ಧಕ್ಕೆ ತಂದಿದ್ದಾರೆ. ಷಡ್ಯಂತ್ರ ರೂಪಿಸಿ ವೈಯಕ್ತಿಕ ಬೆಳೆ ಬೇಯಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದಾಗ ಎಸ್ಐಟಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುವುದು ಕೀಳು ತಂತ್ರವಾಗಿದೆ ಎಂದು ಪ್ರಕಟಣೆಯಲ್ಲಿ ಶ್ಯಾಮ್ ಸುಂದರ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಐಟಿ ಮೇಲೆ ಜಾರಕಿಹೊಳಿ ಒತ್ತಡ ಆರೋಪ: ತನಿಖೆ ಬಗ್ಗೆ ಸಿಡಿ ಲೇಡಿಗೆ ಮತ್ತೆ ಗುಮಾನಿ, ಕಮಿಷನರ್ಗೆ ಪತ್ರ