ಬೆಂಗಳೂರು : ಜೀವನ ನಿರ್ವಹಣೆಗಾಗಿ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಂಗಳಮುಖಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ನಗರದ ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಿವು ಹಾಗೂ ಶಮೀರ್ ಬಂಧಿತರು. ಪುಕಂಬಂ ಪ್ರಶಾಂತ ಎಂಬ ಮಂಗಳಮುಖಿಯ ಮನೆಯಲ್ಲಿ ಘಟನೆ ನಡೆದಿತ್ತು.
ಶಿವು ಮೊದಲಿಂದಲೂ ಮಸಾಜ್ಗೆ ಹೋಗಿ ಹಣ ಖರ್ಚು ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ತನ್ನ ಹತ್ತಿರ ಹಣ ಇಲ್ಲದಿದ್ದರೂ ಬೇರೆಯವರ ಬಳಿ ಸಾಲ ಪಡೆದುಕೊಂಡು ಹೋಗುತ್ತಿದ್ದ. ಎಂದಿನಂತೆ ಆನ್ಲೈನ್ನಲ್ಲಿ ಬುಕಿಂಗ್ ಮಾಡಿ ಮಂಗಳಮುಖಿ ಮನೆಗೆ ಹೋಗಿದ್ದು, ಶಿವು ಮಂಗಳಮುಖಿಯ ಮೊಬೈಲಿಗೆ 20 ಲಕ್ಷ ರೂಪಾಯಿ ಕ್ರೆಡಿಟ್ ಆಗಿರುವ ಮೆಸೇಜ್ ನೋಡಿದ್ದಾನೆ. ಮಸಾಜ್ ಸೇವೆಗೆಂದು ಬಂದಿದ್ದವನು ಆಕೆಯ ಮನೆಯಲ್ಲೇ ಕಳ್ಳತನ ಮಾಡಲು ಸಿನಿಮಾ ರೀತಿಯಲ್ಲಿ ಸಂಚು ರೂಪಿಸಿದ್ದಾನೆ.
ಮಸಾಜ್ ಸೇವೆ ಪಡೆದು ಹೊರಬಂದ ಆರೋಪಿ ತನ್ನ ಸ್ನೇಹಿತ ಶಮೀರ್ಗೆ ಕಳ್ಳತನಕ್ಕೆ ರೂಪಿಸಿರುವ ಸಂಚು ತಿಳಿಸಿ, ಆತನನ್ನು ಮಂಗಳಮುಖಿ ಮನೆಗೆ ಕಳುಹಿಸಿದ್ದಾನೆ. ಶಮೀರ್ ಪುಕಂಬಂ ಮನೆಗೆ ಮಸಾಜ್ ಮಾಡಿಸುವ ನೆಪದಲ್ಲಿ ಬಂದು ಜ್ಯೂಸ್ನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಸಿದ್ದಾನೆ. ಇದ್ದರಿಂದ ಮಂಗಳಮುಖಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, 120 ಗ್ರಾಂ ಚಿನ್ನಾಭರಣ ದೋಚಿ ಆರೋಪಿ ಶಿವನ ಕೈಗೆ ನೀಡಿದ್ದ.
ಬಳಿಕ ಪಿನ್ ನಂಬರ್ ಕಾರ್ಡ್ ಮೇಲೆಯೇ ಬರೆದಿಟ್ಟಿದ್ದರಿಂದ ಆರೋಪಿಗೆ ಸುಲಭವಾಗಿ ಹಣ ತೆಗೆಯಲು ನೆರವಾಗಿದೆ. ಸುಮಾರು 7 ಲಕ್ಷ ರೂ ಹಣವನ್ನು ಹಂತಹಂತವಾಗಿ ವಿತ್ ಡ್ರಾ ಮಾಡುತ್ತಿದಂತೆ ಆಕೆಯ ಮನೆಯಲ್ಲೇ ಇದ್ದ ಶಮೀರ್ ಅಲರ್ಟ್ ಮೆಸೇಜ್ಗಳನ್ನು ಡಿಲಿಟ್ ಮಾಡುವ ಮೂಲಕ ಹಣ ಕಳ್ಳತನ ಆಗಿರುವುದು ಗೊತ್ತಾಗದಂತೆ ನೋಡಿಕೊಂಡಿದ್ದಾನೆ. ಕಾರ್ಡ್‌ನಲ್ಲಿದ್ದ ಹಣ, ಚಿನ್ನಾಭರಣ ಮಾರಿ ಬಂದ ಹಣವೂ ಸೇರಿದಂತೆ ಒಟ್ಟು ಏಳು ಲಕ್ಷ ರೂಪಾಯಿ ತೆಗೆದುಕೊಂಡು ತಮಿಳುನಾಡಿಗೆ ಹೋಗಿದ್ದ ಆರೋಪಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಇದನ್ನೂ ಓದಿ: ಬ್ಯಾಂಕ್ ಖಾತೆಗೆ 2.44 ಕೋಟಿ ಜಮೆ : ಬಯಸದೇ ಬಂದ ಭಾಗ್ಯ.. ಮಸ್ತ್ ಮಜಾ ಮಾಡಿದವರಿಗೆ ಕಾದಿತ್ತು ಶಾಕ್
ಇತ್ತ ಚಿನ್ನಾಭರಣ ಕಳುವಾಗಿರುವುದರ ಬಗ್ಗೆ ಪುಕಂಬಂ ಅವರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಸ್.ಮಂಜುನಾಥ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು. ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಚಿನ್ನಾಭರಣ ಮಾತ್ರವಲ್ಲದೇ ಕಾರ್ಡ್ ಮೂಲಕ ಹಣ ದೋಚಿರುವುದು ಗೊತ್ತಾಗಿತ್ತು. ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಒಟ್ಟು ಎರಡು ಲಕ್ಷ ರೂ ನಗದು ಹಾಗೂ ಕದ್ದ ಹಣದಲ್ಲಿ ಖರೀದಿಸಿದ್ದ 30 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೈಕ್ ಸವಾರನ ಸುಲಿಗೆ: ಮಂಗಳಮುಖಿಯ ಬಂಧನ