ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಹೆಡ್ಕಾನ್ ಸ್ಟೇಬಲ್ ಹರೀಶ್ ವಿರುದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಎಂಟು ದಿನಗಳ ಕಾಲ ಪಡೆದಿದ್ದ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಒಪ್ಪಿಸಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಅಮೃತ್ ಪಾಲ್ ಅಕ್ರಮದಲ್ಲಿ ನೇರವಾಗಿ ಭಾಗಿಯಾಗದೇ ಪರೋಕ್ಷವಾಗಿ ಕೃತ್ಯ ಎಸಗಿರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸಮಗ್ರ ತನಿಖೆ ನಡೆಸಲು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಪಾಲ್ ಹೇಳಿದ್ದೇನು ?: ಅಕ್ರಮಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಎನ್. ಶ್ರೀಹರ್ಷ ಅವರ ಮುಂದೆ 'ನಾನೇನು ತಪ್ಪು ಮಾಡಿಲ್ಲ. ನಾನು ನಂಬಿಕೆಯಿಂದ ಕೆಳ ಹಂತದ ಅಧಿಕಾರಿಗೆ ಸ್ಟ್ರಾಂಗ್ ರೂಮ್ ಕೀ ಕೊಟ್ಟಿದ್ದೆ. ಆದರೆ, ಅವರು ಪಿಎಸ್ಐ ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ. ಸಮಗ್ರ ತನಿಖೆ ನಡೆಸಲು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ ನಾನು' ಎಂದು ಹೇಳಿಕೆ ನೀಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.
ಪಿಎಸ್ಐ ಪ್ರಕರಣ ಸಂಬಂಧ ಹೈಗ್ರೌಂಡ್ಸ್, ಹಲಸೂರು, ರಾಮಮೂರ್ತಿನಗರ, ಯಲಹಂಕ ನ್ಯೂಟೌನ್ ಹಾಗೂ ಕೋರಮಂಗಲ ಐದು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಹೈಗ್ರೌಂಡ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಡಿವೈಎಸ್ಪಿ ಶೇಖರ್ ಬಂಧಿಸಿ ವಿಚಾರಣೆ ನಡೆಸಿದ್ದರು. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹರೀಶ್ , ಪಿಎಸ್ಐ ಮನೋಜ್ ಕುಮಾರ್ ಪರೀಕ್ಷಾ ಅಕ್ರಮ ಎಸಗಿದ ಪ್ರಕರಣದಡಿ ಪಾಲ್ ಅವರನ್ನು ಡಿವೈಎಸ್ಪಿ ಎನ್. ಶ್ರೀಹರ್ಷ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.
ತನಿಖೆಗೆ ಸಲಹೆ ಕೊಟ್ಟಿದ್ದೇ ನಾನು..!: 545 ಮಂದಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ಪಾಲ್ ಅವರನ್ನು ತನಿಖಾಧಿಕಾರಿ ಡಿವೈಎಸ್ಪಿ ಶ್ರೀಹರ್ಷ ವಿಚಾರಣೆ ನಡೆಸಿದ್ದಾರೆ. ಸಾಕ್ಷ್ಯಧಾರ ಸಮೇತ ಮುಂದಿಟ್ಟು ಪ್ರಶ್ನಿಸಿದರೂ ತಮ್ಮ ಮೇಲೆ ಬಂದಿರುವ ಆಪಾದನೆಗಳನ್ನ ತಳ್ಳಿ ಹಾಕುತ್ತಿದ್ದಾರೆ.
'ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರವಿಲ್ಲ.. ನಂಬಿಕೆಯಿಂದ ಕೆಳಹಂತದ ಅಧಿಕಾರಿಗೆ ಒಎಂಆರ್ ಶೀಟ್ ಇಡಲಾಗಿರುವ ಸ್ಟ್ರಾಂಗ್ ರೂಮ್ ಕೀ ಕೊಟ್ಟಿದ್ದೆ. ಆದರೆ, ಅವರು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ನನ್ನ ಮೇಲೆ ಬಂಧಿತ ಆರೋಪಿಗಳು ಮಾಡುತ್ತಿರುವ ಆರೋಪಗಳೆಲ್ಲವೂ ಶುದ್ದ ಸುಳ್ಳು. ಯಾರದೋ ಒತ್ತಡದಿಂದ ನನ್ನ ಮೇಲೆ ಆಪಾದನೆ ಮಾಡಿದ್ದಾರೆ. ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ' ಎಂದು ಸಿಐಡಿ ಮೂಲಗಳು ತಿಳಿಸಿವೆ.
7ನೇ ಆರೋಪಿ ಆಗಿರುವ ಅಮೃತ ಪಾಲ್: ರಾಮಮೂರ್ತಿ ನಗರದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಅಮೃತ್ ಪಾಲ್ ಏಳನೇ ಆರೋಪಿಯಾಗಿದ್ದಾರೆ. ಮೊದಲ ಆರೋಪಿ ಹೆಡ್ ಕಾನ್ಸ್ಟೇಬಲ್ ಹರೀಶ್, ಎರಡನೇ ಆರೋಪಿ ಅನುಗೊಂಡನಹಳ್ಳಿ ಪಿಎಸ್ಐ ಮನೋಜ್, ನೇಮಕಾತಿ ವಿಭಾಗದ ಸಿಬ್ಬಂದಿ ಹರ್ಷ, ಶ್ರೀಧರ್ ಸೇರಿದಂತೆ ಏಳು ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಲಾಸಿಪಾಳ್ಯ ಹೆಡ್ ಕಾನ್ಸ್ಟೇಬಲ್ ಅಕ್ರಮ ಮಾರ್ಗದಲ್ಲಿ ಪಿಎಸ್ಐ ಆಗಲು ಹರ್ಷ ಸೂಚನೆಯಂತೆ ಪಿಎಸ್ಐ ಮನೋಜ್ ಮೂಲಕ 30 ಲಕ್ಷ ಹಣ ಕೊಟ್ಟಿದ್ದರು. ಅಲ್ಲದೇ, ಕುಂಬಳಗೋಡು ಠಾಣೆ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ಸಹ 30 ಲಕ್ಷ ಹಣ ನೀಡಿದ್ದ. ಸದ್ಯ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2019 ರಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೈಟರ್ ಆಗಿದ್ದ ಬಂಧಿತ ಹರೀಶ್ ಕಲಾಸಿಪಾಳ್ಯ ಠಾಣೆಗೆ ವರ್ಗವಾಗಿದ್ದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಕೆಲಸ ಮಾಡುವಾಗ ಮನೋಜ್ ಪಿಎಸ್ಐ ಆಗಿ ನೇಮಕಗೊಂಡಿದ್ದ. ಆಂಧ್ರಹಳ್ಳಿಯಲ್ಲಿ ವಾಸವಾಗಿದ್ದ ಮನೋಜ್ನ ಪೂರ್ವಾಪರ ದಾಖಲಾತಿಯನ್ನ ಹರೀಶ್ ಪರಿಶೀಲಿಸಿದ್ದ. ಇದೇ ಪರಿಚಯ ಕಾಲಕ್ರಮೇಣ ಆತ್ಮೀಯತೆಗೆ ತಿರುಗಿತ್ತು.
ಇದೇ ವೇಳೆ ಹರೀಶ್ ಪತ್ನಿಗೆ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗಾಗಿ 80 ಲಕ್ಷ ಸಾಲ ಮಾಡಿದ್ದ. ಹಣ ಖರ್ಚು ಮಾಡಿದರೂ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ವೈದ್ಯರು ಸ್ಪಷ್ಪಪಡಿಸಿದ್ದರು. ಹೀಗಾಗಿ, 50 ಲಕ್ಷ ಸಾಲಗಾರರಿಗೆ ಹಿಂತಿರುಗಿಸಿದ್ದ. ಉಳಿದ 30 ಲಕ್ಷ ಹಣವನ್ನ ಪಿಎಸ್ಐ ಆಗಲು ಹಣ ಕೊಟ್ಟಿದ್ದ ಎಂಬುದು ಸಿಐಡಿ ಮೂಲಗಳು ಸ್ಪಷ್ಟಪಡಿಸಿವೆ.