ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸಿಐಡಿ ತನಿಖಾಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದೇ ಕೇಸ್ ನಲ್ಲಿ ಬಂಧಿತರಾಗಿರುವ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್ಡಿಎ ಹರ್ಷ ಸೇರಿದಂತೆ ನಾಲ್ವರನ್ನು ಬಾಡಿ ವಾರೆಂಟ್ ಪಡೆದು ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಅಕ್ರಮ ಎಸಗಲು ಎಷ್ಟು ದಿನಗಳಿಂದ ಸಂಚು ರೂಪಿಸಿದ್ದರು? ಅಭ್ಯರ್ಥಿಗಳಿಂದ ಪಡೆದ ಹಣವೆಷ್ಟು ? ಒಎಂಆರ್ ಶೀಟ್ ತಿದ್ದಿದ್ದು ಹೇಗೆ? ಎಂಬುದು ಸೇರಿದಂತೆ ಪ್ರಕರಣಕ್ಕೆ ಬೇಕಾದ ಎಲ್ಲಾ ರೀತಿಯ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಆರೋಪಿಗಳು ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ. 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಅಮೃತ್ ಪಾಲ್ರನ್ನು ಸೋಮವಾರ ರಾತ್ರಿ ಸಿಐಡಿ ಡಿಜಿ ಸಂಧು ಅವರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕುತೂಹಲಕರ ಮಾಹಿತಿ ಹೊರಬಿದ್ದಿದೆ.
ಸ್ಟ್ರಾಂಗ್ ರೂಮ್ಗೆ ಹೋಗಲು ಅನುಮತಿ ಕೊಟ್ಟಿದ್ದೇ ಎಡಿಜಿಪಿ: ಪಿಎಸ್ಐ ಪರೀಕ್ಷೆ ಬಳಿಕ ಸಿಐಡಿ ಪ್ರಧಾನ ಕಚೇರಿಯ ಉತ್ತರಪತ್ರಿಕೆಗಳನ್ನು ಸ್ಟ್ರಾಂಗ್ ರೂಮ್ನಲ್ಲಿ ಇಡಲಾಗಿತ್ತು. ಇದರ ಸಂಪೂರ್ಣ ಮೇಲುಸ್ತುವಾರಿ ಎಡಿಜಿಪಿ ಅವರದ್ದೇ ಆಗಿತ್ತು. ಸ್ಟ್ರಾಂಗ್ ರೂಮ್ ಬೀಗದ ಕೀಗಳನ್ನು ಎಡಿಜಿಪಿ ಛೇಂಬರ್ನ ಅಲ್ಮೇರಾದಲ್ಲಿ ಇಡಲಾಗುತ್ತಿತ್ತು. ಆದರೆ ಅನುಮತಿ ಇಲ್ಲದೆ ಯಾರೂ ಸಹ ಒಳಹೋಗಲು ಸಾಧ್ಯವಿರಲಿಲ್ಲ. ಆದರೆ, ಎಡಿಜಿಪಿಯವರೇ ಡಿವೈಎಸ್ಪಿ ಶಾಂತಕುಮಾರ್, ಎಫ್ಡಿಎ ಸಿಬ್ಬಂದಿ ಹರ್ಷ ಅವರಿಗೆ ಒಳಹೋಗಲು ಅವಕಾಶ ನೀಡಿದ್ದರು ಎನ್ನಲಾಗ್ತಿದೆ.
ಅಲ್ಮೇರಾ ಜವಾಬ್ದಾರಿ ಜೊತೆಗೆ ಸ್ಟ್ರಾಂಗ್ ರೂಮ್ ಪ್ರವೇಶಿಸಲು ನಾಲ್ವರು ಸಿಬ್ಬಂದಿಗೆ ಥಂಬ್ ಇಂಪ್ರೆಷನ್ ಅನುಮತಿ ಸಹ ನೀಡಿದ್ದರಂತೆ. ರಾತ್ರಿ ವೇಳೆ ಓಎಂಆರ್ ಶೀಟ್ ತಿದ್ದುಪಡಿ ಮಾಡಿರುವುದು, ಆರೋಪಿಗಳೊಂದಿಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದುದು ಈ ಮೂಲಕ ತಿಳಿದಿಬಂದಿದೆ.
ಇದನ್ನೂ ಓದಿ: ಬಂಧಿತ ಐಎಎಸ್, ಐಪಿಎಸ್ ಅಧಿಕಾರಿಗಳ ಅಮಾನತುಗೊಳಿಸಿ ಸರ್ಕಾರ ಆದೇಶ