ಬೆಂಗಳೂರು: ಪೊಲೀಸರಿಗೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೂ ಧೃತಿಗೆಡಬಾರದು. ನೀವು ಕಾರ್ಯ ನಿರ್ವಹಿಸುವ ಸ್ಥಳಗಳಿಗೆ ಬಂದು ನಾನು ನಿಮ್ಮ ಜೊತೆ ಕೆಲಸ ನಿರ್ವಹಿಸುತ್ತೇನೆ. ಇದೊಂದು ರೋಗ ಮಾತ್ರ. ಮನಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಅನೇಕ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೆಎಸ್ಆರ್ಪಿ ಸಿಬ್ಬಂದಿ ಕೊರೊನಾ ವಾರಿಯರ್ಸ್ ಆಗಿ ಎಲ್ಲೆಡೆ ಹೋಗಿ ಕೆಲಸ ಮಾಡ್ತಿದ್ದಾರೆ. ನಂಜನಗೂಡು, ಪಾದರಾಯನಪುರ, ಟಿಪ್ಪುನಗರ, ಶಿವಾಜಿನಗರ ಹೀಗೆ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಈ ರೀತಿ ಕೆಲಸ ಮಾಡುವಾಗ ಕೊರೊನಾ ತಗುಲಿದೆ ಎಂದರು.
ಕೊರೊನಾ ಬಾರದಂತೆ ಉತ್ತಮ ಆಹಾರ ಸೇವನೆ ಮಾಡಬೇಕು. ಸದ್ಯ ರ‍್ಯಾಂಡಮ್ ಟೆಸ್ಟ್ ನಡೀತಿದೆ. ಈ ವೇಳೆ ಪಾಸಿಟಿವ್ ಬಂದಿರೋರನ್ನು ಆಸ್ಪತ್ರೆಗೆ ಕಳುಹಿಸಿ ಕೊಡುತ್ತೇವೆ. ಇನ್ನು ಕುಟುಂಬದಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದಿದ್ದಾರೆ.
ಕೊರೊನಾಗೆ ಔಷಧಿ ಇಲ್ಲ ಎಂದು ಪೋಲಿಸ್ ಸಿಬ್ಬಂದಿ ಹೆದರಿದ್ದಾರೆ. ಆದರೆ ನಾವು ಯೂನಿಫಾರ್ಮ್ ಹಾಕಿದ ನಂತರ ಕೆಲಸ ಮಾಡೋದು ಅನಿವಾರ್ಯ. ಇನ್ನು 50 ವರ್ಷ ಮೇಲ್ಮಟ್ಟವರು ಜಾಗೃತಿಯಿಂದ ಇರಬೇಕು. ಯುವ ಪೋಲಿಸ್ ಸಿಬ್ಬಂದಿ ಧೈರ್ಯ ಕಳೆದುಕೊಳ್ಳಬೇಡಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸದ್ಯ ನನ್ನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ನನಗೂ ಪಾಸಿಟಿವ್ ಬಂದಿದೆ ಎಂದು ಕೆಲವರು ಹೇಳ್ತಿದ್ದಾರೆ. ನನ್ನ ಬಗೆಗಿನ ವದಂತಿಗೆಲ್ಲಾ ಕಿವಿಗೊಡಬೇಡಿ. ನಾನು ಫಿಟ್ ಆ್ಯಂಡ್ ಫೈನ್ ಆಗಿದ್ದು, ನನ್ನ ವರದಿ ನೆಗೆಟಿವ್ ಬಂದಿದೆ. ನನಗೀಗ ನನ್ನ ಸಿಬ್ಬಂದಿಗಳಷ್ಟೇ ಮುಖ್ಯ. ಅವರಿಗೆ ಧೈರ್ಯ ತುಂಬುವುದಷ್ಟೇ ಕೆಲಸ ಎಂದರು.