ಬೆಂಗಳೂರು : 2018ರಲ್ಲಿ ಕೆಎಸ್ಎನ್ಡಿಸಿ ಬಳಿ ಸಂಸ್ಥೆಗೆ ಜಾಗ ಸಿಗುವ ನಿರೀಕ್ಷೆಯಲ್ಲಿ ಯುದ್ಧ ವಿಮಾನ ಉಪಕರಣ ತಯಾರಕಾ ಸಂಸ್ಥೆಯಾದ ಎಡಿಡಿ ಸಂಸ್ಥೆಗೆ ಎರಡು ವರ್ಷದಿಂದ ಅಲೆದಾಡಿದರೂ ಕೂಡಾ ನಿವೇಶನ ಸಿಗದೆ ಪರದಾಡುವಂತಾಗಿದೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಎಡಿಡಿ ನಿರ್ದೇಶಕ ಗಿರೀಶ್ ಅವರು, 2 ವರ್ಷಗಳ ಹಿಂದೆ ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ 3000 ಚದರಡಿಯ ಜಾಗ ಪಡೆಯಲು ನೋಂದಣಿ ಮಾಡಿಕೊಂಡಿದ್ದು, 6.55 ಲಕ್ಷ.ರೂ ಹಣ ಕೂಡಾ ಕಟ್ಟಿದ್ದರು. ಆದರೆ, 2 ತಿಂಗಳ ಹಿಂದೆ ಕಾನೂನು ತೊಡಕು ಇದೆ ಎಂದು ಕೆಎಸ್ಎನ್ಡಿಸಿ ಹೇಳುತ್ತಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ರಿಂದಲೂ ಶಿಫಾರಸು : ಒಂದು ವರ್ಷದ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ಈ ವಿಷಯ ತಂದಾಗ, ಸೀತಾರಾಮನ್ ಶೀಘ್ರವಾಗಿ ಜಾಗ ನೀಡಬೇಕು ಎಂದು ಶಿಫಾರಸು ಮಾಡಿದ್ದರು. ಆದರೂ ಜಾಗ ಸಿಗುತ್ತಿಲ್ಲ. ಈಗ ಆ ಜಾಗಕ್ಕೆ ಕಾನೂನು ತೊಡಕು ಉಂಟಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇಡಿಕೆ : ಬೆಂಗಳೂರು ಸುತ್ತಮುತ್ತಲಿನ ಯಾವ ಪ್ರದೇಶದಲ್ಲಾದರೂ ಜಾಗ ನೀಡಿ ಎಂದು ಎಡಿಡಿ ಸಂಸ್ಥೆಯ ನಿರ್ದೇಶಕ ಗಿರೀಶ್ ಕೇಳುತ್ತಿದ್ದಾರೆ. ಇವರು ಹೇಳುವ ಪ್ರಕಾರ ಭಾರತ ರಕ್ಷಣಾ ಇಲಾಖೆಯ ಯುದ್ದ ವಿಮಾನ ತಯಾರಿಕಾ ಎಚ್ಎಎಲ್ಗೆ ಉಪಕರಣಗಳನ್ನ ನೀಡಬೇಕಾಗುತ್ತದೆ. ಎಚ್ಎಎಲ್ ಅಧಿಕಾರಿಗಳೊಂದಿಗೆ ನಿರಂತರ ಭೇಟಿ ಮಾಡಬೇಕಾದ ಕಾರಣ ಆನೇಕಲ್, ನೆಲಮಂಗಲ ಅಥವಾ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದಲ್ಲಿ ಜಾಗ ಅಥವಾ ನಿವೇಶನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ನೆರೆ ರಾಜ್ಯದಲ್ಲಿ ಜಾಗ ಸಿಗುವುದು ಬಹಳ ಸುಲಭ : ಆಂಧ್ರಪ್ರದೇಶದಲ್ಲಿ ಯಾವುದೇ ಅಡೆತಡೆ ಇಲ್ಲದೆ ಜಾಗ ನೀಡುವುದಾಗಿ ಹೇಳಿದ್ದಾರೆ. ವಿದೇಶಿ ಬಂಡವಾಳ ಜರ್ಮನಿ ಹಾಗೂ ರಷ್ಯಾ ರಾಷ್ಟ್ರದಿಂದ ಹರಿದು ಬರುತ್ತಿದೆ ಅಂದರೆ ಕೂಡಲೇ ಸಿಂಗಲ್ ವಿಂಡೋ ಮಾದರಿಯಲ್ಲಿ ಎಲ್ಲಾ ಕೆಲಸ ಮುಗಿಸಿ ಕೈಗಾರಿಕಾ ಕಾರ್ಯಾರಂಭ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ನಾನು ಕನ್ನಡದವನಾಗಿ ಈ ರಾಜ್ಯದಲ್ಲಿ ಕೈಗಾರಿಕೆ ಪ್ರಾರಂಭ ಮಾಡುವುದಕ್ಕೆ ಆಸಕ್ತನಾಗಿದ್ದೇನೆ ಎಂದರು. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈಟಿವಿ ಭಾರತ ಕೆಎಸ್ಎನ್ಡಿಸಿ ಅಧಿಕಾರಿಗಳಿಗೆ ಸಂಪರ್ಕ ಮಾಡಿದಾಗ, ಬಕ್ರೀದ್ ಇರುವ ಕಾರಣ ಸೋಮವಾರ ಇದರ ಬಗ್ಗೆ ನೋಡುವುದಾಗಿ ಹೇಳಿದರು.