ಬೆಂಗಳೂರು: ಅದಾನಿ ಸಮೂಹದ ವಿರುದ್ಧ ತನಿಖೆಗೆ ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಬೇಕು ಎಂದು ರಾಜಸ್ಥಾನದ ಕಾಂಗ್ರೆಸ್ ಮುಖಂಡ ಸಚಿನ್ ಪೈಲೆಟ್ ಒತ್ತಾಯಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ನಾವು ಕೇಳಿದ ಪ್ರಶ್ನೆಗಳಲ್ಲಿ ಒಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿಲ್ಲ ಎಂದರು.
ಖಾಸಗಿ ಮಾಲೀಕತ್ವ ಹಾಗೂ ಸಣ್ಣ ಉದ್ದಿಮೆಗಳ ಕಾರ್ಯನಿರ್ವಹಣೆಯ ಬಗ್ಗೆ ನಾವು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜಂಟಿ ಸದನ ಸಮಿತಿ ರಚಿಸುವ ಬೇಡಿಕೆಗೂ ಬೆಲೆ ಇಲ್ಲ. ಅತಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರು ಇರುವುದರಿಂದಲೇ ನಮ್ಮ ಬೇಡಿಕೆಗೆ ಬೆಲೆ ಸಿಗುತ್ತಿಲ್ಲ ಎಂದು ದೂರಿದರು.
ಸರ್ಕಾರ ಉದ್ದೇಶಪೂರ್ವಕ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂಬ ಭಾವನೆ ನಮ್ಮದು. ಅದಾನಿ ಸಮೂಹದ ಮೇಲೆ ಪಾರದರ್ಶಕ ತನಿಖೆ ಮಾಡಬೇಕು. ಕಳೆದ 81 ವರ್ಷಗಳಿಂದ ಪೂರ್ಣ ಪ್ರಮಾಣದ ಅಧಿಕಾರ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ಒತ್ತಾಯವನ್ನು ತಿರಸ್ಕರಿಸಿದೆ ನಾವು ಸದನದೊಳಗೆ ಹಾಗೂ ಹೊರಗೆ ಕೇಳುತ್ತಿರುವ ಪ್ರಶ್ನೆಗೆ ಸರಿಯಾಗಿ ಉತ್ತರ ಸಿಗುತ್ತಿಲ್ಲ. ಕಾಂಗ್ರೆಸ್ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಪಾರದರ್ಶಕವಾದ ಉತ್ತರ ನಿರೀಕ್ಷಿಸುತ್ತಿದೆ ಎಂದರು.
ದೇಶದ ಪ್ರತಿ ಕ್ಷೇತ್ರವು ಸಂಕಷ್ಟಕ್ಕೆ ಸಿಲುಕುತ್ತದೆ. ವಿವಿಧ ಕಾರಣಕ್ಕೆ ಬುದ್ಧಿವಂತ ವ್ಯಕ್ತಿಗಳು ದೇಶವನ್ನು ತೊರೆಯುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಸಾಧನೆ ಗಣನೀಯವಾಗಿ ಖುಷಿಯುತ್ತಿದ್ದು ದಶಕಗಳಷ್ಟು ಹಿಂದಕ್ಕೆ ಸರಿದಿದ್ದೇವೆ. ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಎಲ್ಲಾ ತನಿಖಾ ಸಂಸ್ಥೆಗಳಿದ್ದು ನಮ್ಮ ಮನವಿಗೆ ಯಾವುದಕ್ಕೂ ಪುರಸ್ಕಾರ ಸಿಗುತ್ತಿಲ್ಲ. ಅವರು ಅನಗತ್ಯವಾಗಿ ಜನರ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಸಾಧನೆಯನ್ನು ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಬಿಜೆಪಿ ಸರ್ಕಾರ. ಆದರೆ ಇವರು ಜಾರಿಗೆ ತಂದ ಯಾವ ಒಂದು ಕಾರ್ಯಕ್ರಮವು ಯಶಸ್ವಿಯಾಗಿಲ್ಲ. ಅನಗತ್ಯವಾಗಿ ರಾತ್ರೋರಾತ್ರಿ ಕಾಯ್ದೆಗಳನ್ನು ಜಾರಿಗೆ ತಂದು ಆರ್ಥಿಕ ಹೊರೆಯನ್ನು ಜನರ ಮೇಲೆ ಹೊರಿಸುತ್ತಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಜನ ಬದಲಾವಣೆ ಬಯಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಸಿದ್ದರಾಗಿದ್ದಾರೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪೂರ್ಣ ಬಹುಮತ ದೊರೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಜನ ಬದಲಾವಣೆ ಬಯಸಿದ್ದಾರೆ. ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಚಾರವನ್ನು ಧಿಕ್ಕರಿಸಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:ತೋಟಗಾರಿಕಾ ಬೆಳೆ ಮೌಲ್ಯವರ್ಧನೆ, ರಫ್ತು, ಸಂಸ್ಕರಣೆಗೆ ಒತ್ತು: ವಿಶೇಷ ಅನುದಾನಗಳ ಘೋಷಣೆ